ಬೆಳಗಾವಿ : ಸೋಮವಾರ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿದೆ.
ಸಮಾವೇಶದಲ್ಲಿ ”ಯುವನಿಧಿ” ಎಂಬ ಹೆಸರಿನಲ್ಲಿ ಪ್ರತಿ ತಿಂಗಳು ಪದವೀಧರರಿಗೆ ರೂ. 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ. ಭತ್ಯೆ ನೀಡುವ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷ ಯುವ ಸಭಲೀಕರಣಕ್ಕೆ ಮಹತ್ವದ ಗ್ಯಾರಂಟಿ ನಂ4 ಘೋಷಿಸುತ್ತಿದೆ. 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ 3000 ರೂ. ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನ ಘೋಷಿಸುತ್ತಿದ್ದೇವೆ. ಯುವ ಶಕ್ತಿಗೆ ಶಕ್ತಿ ತುಂಬುವುದೇ ನಮ್ಮ ಧ್ಯೇಯ.ಇದು ನಮ್ಮ ಭರವಸೆ ಮಾತ್ರವಲ್ಲ, ಬದ್ಧತೆಯೂ ಹೌದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.
ಅಧಿಕಾರಕ್ಕೆ ಬಂದರೆ ‘ಗೃಹ ಜ್ಯೋತಿ’ ಹೆಸರಿನಲ್ಲಿ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್, ‘ಗೃಹಲಕ್ಷ್ಮೀ’ ಹೆಸರಿನಲ್ಲಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2,000ರೂ.,‘ಅನ್ನಭಾಗ್ಯ‘ಹೆಸರಿನಲ್ಲಿ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಗ್ಯಾರಂಟಿ ಗಳನ್ನು ಈಗಾಗಲೇ ಕಾಂಗ್ರೆಸ್ ಪಕ್ಷ ಘೋಷಿಸಿದೆ.