Advertisement

ಅನಾಲಿಟಿಕಾ ಸಿಇಒ ಕಚೇರಿಯಲ್ಲಿ ಕೈ ಫ‌ಲಕ

07:00 AM Mar 29, 2018 | Team Udayavani |

ಹೊಸದಿಲ್ಲಿ:  ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ಯಾವುದೇ ಸಂಪರ್ಕ ಇಲ್ಲ ಎಂದು ಕಾಂಗ್ರೆಸ್‌ ಪ್ರತಿಪಾದಿಸುತ್ತಾ ಬಂದಿದೆ. ಆದರೆ ಬುಧವಾರ ಬಹಿರಂಗವಾದ ಹೊಸ ಮಾಹಿತಿಯಂತೆ ಕೇಂಬ್ರಿಡ್ಜ್ ಅನಾಲಿಟಿಕಾದ ಸಿಇಒ ಆಗಿದ್ದ ಅಲೆಕ್ಸಾಂಡರ್‌ ನಿಕ್ಸನ್‌ ಕಚೇರಿಯಲ್ಲಿ ಕಾಂಗ್ರೆಸ್‌ನ ಚಿಹ್ನೆ ಇರುವ ಫೋಟೋ ಬಹಿರಂಗವಾಗಿದೆ. ಮಾತ್ರವಲ್ಲ ಅದರಲ್ಲಿ ಕಾಂಗ್ರೆಸ್‌ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಇದುವರೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ರ ಚುನಾವಣೆಯಲ್ಲಿ ಮಾತ್ರ ಭಾಗಿ ಎಂದು ಹೇಳಿಕೊಂಡಿದ್ದ ಸಂಸ್ಥೆಯ ದ್ವಂದ್ವತೆಯೂ ಬಯಲಾಗಿದೆ. 

Advertisement

ಅಮೆರಿಕ ಚುನಾವಣೆ ಗಳಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊಂದಿರುವ ಕೇಂಬ್ರಿಜ್‌ ಅನಾಲಿಟಿಕಾಗೆ ಭಾರತದಲ್ಲಿ ಕಾಂಗ್ರೆಸ್‌ ಗ್ರಾಹಕನಾಗಿತ್ತು ಎಂಬುದು ಮಂಗಳವಾರ ಬಹಿರಂಗ ಗೊಂಡಿರುವ ಬೆನ್ನಲ್ಲೇ, ಇದೀಗ ಭಾರತದಲ್ಲಿ ಸಂಸ್ಥೆ ಕೆಲಸ ಮಾಡಿರುವ ಚುನಾವಣೆಗಳ ಬಗ್ಗೆ ಸಮಗ್ರ ವಿವರಗಳನ್ನು ಸಂಸ್ಥೆಯ ಮಾಜಿ ಕೆಲಸಗಾರ ಕ್ರಿಸ್ಟೋಫ‌ರ್‌ ವೈಲೀ ಹೇಳಿದ್ದಾರೆ. ಸಂಸ್ಥೆ ಕೆಲಸ ಮಾಡಿದ ಎಲ್ಲ ಚುನಾವಣೆಗಳ ವಿವರವನ್ನು ಟ್ವಿಟರ್‌ನಲ್ಲಿ ಬಹಿರಂಗ ಗೊಳಿಸಿರುವ ವೈಲೀ, ಭಾರತದಲ್ಲಿ ಎಸ್‌ಸಿಎಲ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

600 ಜಿಲ್ಲೆಗಳ ವಿವರ: ಎಸ್‌ಸಿಎಲ್‌ ಇಂಡಿಯಾ ಸಂಸ್ಥೆಯ ಬಳಿ 600 ಜಿಲ್ಲೆಗಳ, 7ಲಕ್ಷ ಹಳ್ಳಿಗಳ ದತ್ತಾಂಶವಿದೆ. ಇದನ್ನು ನಿರಂತರವಾಗಿ ಅಪ್‌ಡೇಟ್‌ ಮಾಡಲಾಗುತ್ತಿದೆ. ಕುಟುಂಬ, ಜಾತಿ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಾಗಿದೆ.

2007, 2011 ಹಾಗೂ 2012ರಲ್ಲಿ ಉ.ಪ್ರ ಚುನಾವಣೆ:2012ರಲ್ಲಿ ಒಂದು ಪಕ್ಷದ ಪರವಾಗಿ ಜಾತಿ ಆಧರಿತ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಮೂಲಕ ಪಕ್ಷಕ್ಕೆ ನಿಷ್ಠವಾಗಿರುವ ಜಾತಿಯ ಮತದಾರರನ್ನು ಗುರುತಿಸಲು ಸಹಾಯ ಮಾಡಲಾಗಿತ್ತು. 2011ರಲ್ಲೂ ರಾಜ್ಯಾದ್ಯಂತ ಜಾತಿ ಸಮೀಕ್ಷೆ ಮಾಡಲಾಗಿತ್ತು. ನಂತರ ಈ ಬೂತ್‌ ಮಟ್ಟದ ವಿವರವನ್ನು ವಿಶ್ಲೇಷಿಸಿ, ಅನಿಶ್ಚಿತ ಮತದಾರ ರನ್ನು ಮನವೊಲಿಸಲಾಗುತ್ತಿತ್ತು.

ಫೇಸ್‌ಬುಕ್‌ಗೆ ವಿವರ ನೀಡುವಂತೆ ಸೂಚನೆ
ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯು ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಬಳಸಿದ್ದ ಆರೋಪದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ. ಏಪ್ರಿಲ್‌ 7ರ ಒಳಗೆ ಮಾಹಿತಿ ನೀಡುವಂತೆ ಸೂಚಿಸಿದ್ದು, ಈ ಸಂಬಂಧ ಫೇಸ್‌ಬುಕ್‌ಗೆ ಪ್ರಶ್ನೆಗಳನ್ನು ನೀಡಿದೆ. ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯು ಭಾರತೀಯ ಮತದಾರರ ವೈಯಕ್ತಿಕ ವಿವರಗಳು ಮತ್ತು ಫೇಸ್‌ಬುಕ್‌ ಬಳಕೆದಾರರ ವಿವರಗಳನ್ನು ಪಡೆದಿದೆಯೇ ಅಥವಾ ಫೇಸ್‌ಬುಕ್‌ ಸಹಭಾಗಿತ್ವದಲ್ಲಿ ಯಾವುದೇ ಇತರ ಸಂಸ್ಥೆಯು ಚುನಾವಣೆ ಅಕ್ರಮದಲ್ಲಿ ತೊಡಗಿಸಿಕೊಂಡಿದೆಯೇ ಎಂಬ ಪ್ರಶ್ನೆಯನ್ನು ಕೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next