ಹೊಸದಿಲ್ಲಿ: ಇನ್ನೇನು ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಧಾನ ವಿಪಕ್ಷ ಕಾಂಗ್ರೆಸ್‌ಗೆ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಭಾರೀ ಪ್ರಮಾಣದ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಹೀಗಾಗಿ, ಅದು ಸರಳ ಮತ್ತು ಆನ್‌ಲೈನ್ ಕ್ರೌಡ್ ಫಂಡಿಂಗ್ ವ್ಯವಸ್ಥೆಯ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದೆ.
2013ರಲ್ಲಿ 15 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಪಕ್ಷ ಈಗ ಕೇವಲ 2 ರಾಜ್ಯಗಳಲ್ಲಿ ಮಾತ್ರ ಇದ್ದು, ಐದು ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ಗೆ ಸಿಗಬೇಕಾಗಿದ್ದ ದೇಣಿಗೆಗಳ ಮೂಲಗಳೆಲ್ಲ ಬರಿದಾಗಿದೆ ಎಂದು “ಬ್ಲೂಮ್‌ಬರ್ಗ್’ ವರದಿ ಮಾಡಿದೆ. ಕಾಂಗ್ರೆಸ್ ಎಷ್ಟರ ಮಟ್ಟಿಗೆ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದೆ ಎಂದರೆ, ದಿನವಹಿ ವೆಚ್ಚಗಳ ಮೇಲೆ ಕೂಡ ನಿಯಂತ್ರಣ ಹೇರಬೇಕಾದ ಕಠಿಣ ಪರಿಸ್ಥಿತಿ ಇದೆ. ಈ ಮಾಹಿತಿಯನ್ನು ಹೆಸರು ಬಹಿರಂಗಪಡಿಸಲಿಚ್ಛಿಸದ ನಾಯಕರೊಬ್ಬರು ನೀಡಿದ್ದಾರೆ. ಇದುವರೆಗೆ ನಡೆದ ಚುನಾವಣೆಗಳಲ್ಲಿ ಮೋದಿ-ಶಾ ಜೋಡಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಇರುವ ರಾಜ್ಯಗಳಲ್ಲಿ ಗೆದ್ದು, ಸದ್ಯ ಒಟ್ಟು 20 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ.
ಇನ್ನು ಪಕ್ಷಗಳ ಆದಾಯ ಮೇಲೆ ಗಮನ ಹರಿಸಿದರೆ 2017ರ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾದಂತೆ ಬಿಜೆಪಿ 1,039 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಿಕೊಂಡಿದ್ದರೆ, ಕಾಂಗ್ರೆಸ್ 225 ಕೋಟಿ ರೂ. ಮಾತ್ರ ಪಡೆದುಕೊಂಡಿದೆ. ಕಾಂಗ್ರೆಸ್‌ನ ಸ್ಥಿತಿ ಹೇಗಾಗಿತ್ತು ಎಂದರೆ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಪಕ್ಷದ ಹಿರಿಯ ನಾಯಕರಿಗೆ ವಿಮಾನದ ಮೂಲಕ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಚುನಾವಣಾ ಪೂರ್ವ ಸಿದ್ಧತೆ ನಡೆಸಲೂ ಅನಾನುಕೂಲವಾಗಿತ್ತು. ಹೀಗಾಗಿ ನಾಯಕರ ಪ್ರಯಾಣಗಳ ಮೇಲೂ ನಿಯಂತ್ರಣ ಹೇರಲಾಗಿದೆ.
ಬಿಜೆಪಿಗೆ 2016 ಮಾರ್ಚ್ ವರೆಗೆ 2,987 ಕಾರ್ಪೊರೇಟ್ ನಾಯಕರಿಂದ 705 ಕೋಟಿ ರೂ., ಕಾಂಗ್ರೆಸ್‌ಗೆ 167 ಉದ್ದಿಮೆ ಸಂಸ್ಥೆಗಳಿಂದ 198 ಕೋಟಿ ರೂ. ಸಿಕ್ಕಿದೆ ಎಂದು ಎಸೋಸಿಯೇಶನ್ ಫಾರ್ ಡೆಮಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಅದ್ದೂರಿ ಪ್ರಚಾರದ ಎದುರು, ಪ್ರಧಾನವಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳದ್ದು ಮಂಕಾಗುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿಗೆ ಹೋಲಿಕೆ ಮಾಡಿದರೆ ಸದ್ಯ ನಮ್ಮ ಪಕ್ಷದ ಬಳಿ ಆರ್ಥಿಕ ಸಂಪನ್ಮೂಲ ಇಲ್ಲ. ಕೇಂದ್ರ ಸರಕಾರ ಆರಂಭ ಮಾಡಿದ ಎಲೆಕ್ಟೋರಲ್ ಬಾಂಡ್‌ಗಳಿಂದಲೂ ಪಕ್ಷಕ್ಕೆ ಹೇಳುವಂಥ ನೆರವಾಗಿಲ್ಲ.
ರಮ್ಯ ದಿವ್ಯಸ್ಪಂದನ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ