ಚಿತ್ರದುರ್ಗ: ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಷ್ಟ್ರೀಯ ಅಧ್ಯಕ್ಷರು ಹಾಗು ಹೈಕಮಾಂಡ್ ಗೆ ಬಿಟ್ಟಿದ್ದು. ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯಿಂದ ಬಿ.ಫಾರ್ಮ್ ಪಡೆದು ಗೆದ್ದ ಎಲ್ಲರೂ ಪಕ್ಷದ ಕಾರ್ಯಕರ್ತರು, ಮಿತ್ರಮಂಡಳಿ ಇಲ್ಲವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದಲಿತ ಸಿಎಂ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಮೊದಲ ಸಚಿವ ಸಂಪುಟದಲ್ಲಿಯೇ ಅಂಬೇಡ್ಕರ್ ನೋವಿನಿಂದ ಹೊರಗೆ ಬಂದಿದ್ದರು. ಅಂಬೇಡ್ಕರ್ ಲೋಕಸಭೆ ಚುನಾವಣೆಗೆ ನಿಂತಾಗ ಸೋಲಿಸಿದ್ದು ಕಾಂಗ್ರೆಸ್, 2ನೇ ಬಾರಿ ಅವರ ಸಹಾಯಕನನ್ನು ಎದುರು ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಅವರಿಗೆ ಭಾರತರತ್ನ ಪುರಸ್ಕಾರವನ್ನು ಕೊಡಲಿಲ್ಲ, ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ನಾವು ಎಂದರು.
ಕಾಂಗ್ರೆಸ್ ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ. ಸಿದ್ಧರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದವರು. ಡಾ.ಜಿ.ಪರಮೇಶ್ವರ್ ಅವರಿಗೆ ಡಿಸಿಎಂ ಮಾಡಲಿಲ್ಲ, ಬದಲಾಗಿ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ, ಬಿ.ಎನ್.ಚಂದ್ರಪ್ಪ, ಧ್ರುವನಾರಾಯಣ, ಸೇರಿದಂತೆ ದಲಿತ ಮುಖಂಡರನ್ನು ಸೋಲಿಸಿದರು. ಈವತ್ತಿಗೂ ಖರ್ಗೆ, ಪರಮೇಶ್ವರ್ ಮುಂದಕ್ಕೆ ಬರಲು ಬಿಡುತ್ತಿಲ್ಲ ಎಂದರು.
ಇದನ್ನೂ ಓದಿ:ಧಾರ್ಮಿಕ ಕೇಂದ್ರಗಳು, ಅಮ್ಯೂಸ್ ಮೆಂಟ್ ಪಾರ್ಕ್ ತೆರೆಯಲು ಅನುಮತಿ: ಜಾತ್ರೆಗೆ ಇಲ್ಲ ಅವಕಾಶ
ಆದರೆ, ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದೆ. ಮುಸ್ಲಿಂ ಅಬ್ದುಲ್ ಕಲಾಂರನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ. ದಲಿತರಾದ ರಾಮನಾಥ ಕೋವಿಂದ್ ರನ್ನು ರಾಷ್ಟ್ರಪತಿ ಮಾಡಿದ್ದೇವೆ. ಕೇಳದೆ ಇದ್ದರೂ ಗೋವಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿ ಅವರನ್ನು ಚಿತ್ರದುರ್ಗದಲ್ಲಿ ಸಂಸದರನ್ನಾಗಿ ಮಾಡಿ ಕೇಂದ್ರ ಮಂತ್ರಿ ಮಾಡಿದ್ದೇವೆ ಎಂದು ಹೇಳಿದರು.
ಸಿದ್ಧರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ರಾಜ್ಯದ ಇತಿಹಾಸದಲ್ಲಿ ಯಾವ ಸರ್ಕಾರವೂ ಮಾಡಿಲ್ಲ. ಅರ್ಕಾವತಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ನಳಿನ್ ಕಟೀಲ್ ವಾಗ್ದಾಳಿ ನಡೆಸಿದರು.