ಮಾಗಡಿ: ಚುನಾವಣೆ ಬಂದಾಗ ಮೂಗುತಿ ಹಂಚುವವರು ಬೇಕಾ?. ಪುಣ್ಯ ಕ್ಷೇತ್ರವಾದ ತಿರುಪತಿ, ಧರ್ಮಸ್ಥಳಕ್ಕೆ ಯಾತ್ರೆ ಕಳಿಸುವವರು ಬೇಕಾ ಅಥವಾ ಬಡವರ ಪರವಾಗಿ ನಿಲ್ಲುವ ಕಾಂಗ್ರೆಸ್ ಪಕ್ಷ ಬೇಕಾ ಎಂಬುದನ್ನು ಮತದಾರರೇ ತೀರ್ಮಾನಿಸುತ್ತಾರೆ. ಬಡವರ ಪರ, ಜನಪರವಾದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಜನರು ವ್ಯಕ್ತಪಡಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ವಿಧಾನಸಭಾ ಕ್ಷೇತ್ರ ಅಕ್ಕೂರಿನ ವಿರೂಪಸಂದ್ರದಲ್ಲಿ ಜನಾಶೀರ್ವಾದ ಕೋರಿ ಮನೆ ಮನೆಗೆ ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರ ಬಂದ ಕೂಡಲೇ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಕುಟುಂಬದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ಹಣವನ್ನು ಹಾಕುತ್ತೇವೆ. 10 ಕೆ.ಜಿ. ಅಕ್ಕಿ ನೀಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಯೋಜನೆಯಾಗಿದ್ದು, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ನಮ್ಮ ಪರ ಮತ ನೀಡಿ ನನ್ನನ್ನು ಗೆಲ್ಲಿಸಿ ಕೊಡಬೇಕು. ನಿಮ್ಮ ಪರವಾಗಿ ನಿಂತು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.
ಶಾಸಕರ ವಿರುದ್ಧ ಆಕ್ರೋಶ: ಕ್ಷೇತ್ರದಲ್ಲಿ ಸರ್ಕಾರದಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ, ಶಾಸಕ ಎ. ಮಂಜುನಾಥ್ ರೈತರ ಪರವಾಗಿ ನಿಲ್ಲುತ್ತಿಲ್ಲ. ಬೆಸ್ಕಾಂಗೆ ಹಣ ಕಟ್ಟಿ ಮೂರು ವರ್ಷಗಳು ಆಗಿದ್ದರೂ, ರೈತರ ಪಂಪ್‌ಸೆಟ್‌ಗಳಿಗೆ ಟೀಸಿ ಕೊಡಿಸಲಾಗಲಿಲ್ಲ. 33 ಸಾವಿರ ಹಣ ಕಟ್ಟಿಸಿಕೊಂಡಿದ್ದರೂ, ಕೂಡ ಇಲ್ಲಿಯವರೆಗೂ ಪಂಪ್‌ಸೆಟ್‌ಗಳಿಗೆ ಟೀಸಿ ಕೊಡಿಸಲು ಆಗಿಲ್ಲ. ಇದನ್ನು ಅಧಿವೇಶನದಲ್ಲಿ ಚರ್ಚಿಸಿ ರೈತರಿಗೆ ನ್ಯಾಯ ಕೊಡಿಸಲಾಗದ ಶಾಸಕರು ನಮಗೆ ಬೇಕಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿದೆ. ಬೆಂಗಳೂರು-ಮೈಸೂರು ರಸ್ತೆ ಬಗ್ಗೆ ಮಾತನಾಡುವ ಶಾಸಕರು, ಮರೂರು ಬಳಿ ಕೈಗಾರಿಕೆಗಾಗಿ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರೂ, ರೈತರು ಹೋರಾಟಕ್ಕಿಳಿದು ಪ್ರಾಣಕೊಟ್ಟೆವು. ಕೈಗಾರಿಕೆ ಭೂಮಿ ಕೊಡುವುದಿಲ್ಲ ಎಂದು ಬೊಬ್ಬೆ ಹೊಡೆದರೂ ನ್ಯಾಯ ಕೊಡಿಸದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಎಂದರು.
ಎಷ್ಟು ಜನಕ್ಕೆ ಉದ್ಯೋಗ ಕೊಡಿಸಿದ್ದಾರೆ?: ಮಾಗಡಿ ತಾಲೂಕಿನಲ್ಲಿ ಎಷ್ಟು ಜನಕ್ಕೆ ಶಾಸಕರು ಉದ್ಯೋಗ ಕೊಡಿಸಿದ್ದಾರೆ ತಿಳಿಸಲಿ. ಕಾಯಂ ಉದ್ಯೋಗ ಕೊಡದೆ ಕೇವಲ 15 ರಿಂದ 20 ಸಾವಿರ ಸಂಬಳಕ್ಕೆ ಕೆಲಸ ಮಾಡಲು ಆಗುತ್ತಾ, ತೋಟಗಾರಿಕೆ ಬೆಳೆ ಬೆಳೆದು ಲಕ್ಷಾಂತರ ರೂ. ಗಳಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರನ್ನು ಒಕ್ಕಲಿಬ್ಬಿಸುವ ಕೆಲಸ ನಡೆದಿದೆ. ಸಾವಿರಾರು ಎಕರೆ ಗೋಮಾಳವಿದೆ. ಮತಕೊಟ್ಟವರ ಭೂಮಿ ಕಸಿಯುವ ಶಾಸಕರು ಭೂಮಾಫಿಯದಲ್ಲಿ ಪಟಲಾಂಗಳನ್ನು ತೊಡಗಿಸಿದ್ದಾರೆ. ಅವರ ಹಿಂಬಾಲಕರೇ ಕೈಗಾರಿಕೆ ವಿರೋಧಿಸುತ್ತಿದ್ದರೂ, ಶಾಸಕರು ಮಾತ್ರ ತಮ್ಮ ನಿರ್ಧಾರ ಬದಲಾಯಿಸುತ್ತಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಲ್ಲೆಡೆ ಆಕ್ರೋಶಗಳು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ರೈತರ ಪರವಾಗಿ ನಿಂತಿರುವುದೇ ಕಾಂಗ್ರೆಸ್ ಪಕ್ಷ. ಸ್ಪಷ್ಟ ಬಹುಮತ ಬರುವುದೇ ಕಾಂಗ್ರೆಸ್ ಪಕ್ಷಕ್ಕೆ. ನಿಮ್ಮೆಲ್ಲರ ಆಶೀರ್ವಾದ ಕೇಳಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಅರಿಸಿ ಬಹುಮತದಿಂದ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆಗೆ ಸದಾ ಬದ್ಧನಾಗಿರುತ್ತೇನೆ ಎಂದು ಮನವಿ ಮಾಡಿದರು.
ಜೆಡಿಎಸ್ ನಂಬಬೇಡಿ: ಜೆಡಿಎಸ್ ಪಕ್ಷವು ಸುಳ್ಳು ಹೇಳಿಕೊಂಡು ಕೆಲವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳಲು ಹೋಗುತ್ತಿದ್ದಾರೆ. ಅದನ್ನು ನಂಬಬೇಡಿ. ಚುನಾವಣೆ ಘೋಷಣೆ ಆಗಲಿ, ಜೆಡಿಎಸ್ ಪಕ್ಷದಿಂದ ಸಾಕಷ್ಟು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಯಾರು ತಡೆಯಾಗುವುದಿಲ್ಲ. ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಸಿಗುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಜನಾಶೀರ್ವಾದಕ್ಕೆ ಭೇಟಿ ನೀಡುತ್ತಿದ್ದಂತೆ ಅಲ್ಲಲ್ಲಿ ಆರತಿ, ಪಟಾಕಿ ಸಿಡಿಸುವುದು, ಸಿಹಿ ಹಂಚುವುದು ಹಾಗೂ ಬಾರಿ ಗಾತ್ರದ ಸೇಬಿನ ಹಾರ ಹಾಕಿ ಪುಷ್ಪಸಿಂಚನ ಮಾಡಿದರು.