Advertisement
ದೊಡ್ಡ ಸಿಕ್ಸರ್ ಬಾರಿಸುವುದಾಗಿ ಕ್ರೀಸ್‌ಗೆ ಇಳಿದು ಶೂನ್ಯಕ್ಕೆ ಬೌಲ್ಡ್ ಆದ ನವಜೋತ್ ಸಿಂಗ್ ಸಿಧುವಿನ ಅಬ್ಬರ ಕ್ರೀಡಾಂಗಣಕ್ಕಷ್ಟೇ ಸೀಮಿತ ಎಂಬುದು ಸಾಬೀತಾಗಿದೆ. ಈಗ ಅನ್ಯ ಪ್ರಕರಣ ಸಂಬಂಧ ಜೈಲಿನಲ್ಲಿದ್ದಾರೆ. ಪಂಜಾಬ್‌ನಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಹಿರಿಯ ಮುಖಂಡ ಸುನಿಲ್ ಜಾಖಡ್ ಸಹ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿದ್ದಾರೆ. ಆಮ್ ಆದ್ಮಿ ಪಕ್ಷದ ಬಾಗಿಲನ್ನು ಕಾಂಗ್ರೆಸ್‌ನವರು ಬಡಿಯುವ ಮೊದಲು ನಾವೇ ಒಳಗೆ ಕರೆದರೆ ಸೂಕ್ತ ಎಂಬುದೂ ಕಾರ್ಯತಂತ್ರವೇ. ಆಗ ಆಮ್ ಆದ್ಮಿ ಬಲಗೊಳ್ಳುವುದಿಲ್ಲ, ಕಾಂಗ್ರೆಸ್ ಬಲಹೀನಗೊಳ್ಳುತ್ತದೆ. 2024ರ ಲೋಕಸಭಾ ಚುನಾವಣೆ ಹೊತ್ತಿಗೆ ಪಕ್ಷದ ಸ್ಥಿತಿ ಕೊಂಚವಾದರೂ ಸುಧಾರಿಸಬೇಕೆಂಬ ಬಿಜೆಪಿಯ ಲೆಕ್ಕಾಚಾರದ ಭಾಗವೂ ಹೌದು. ಸುಮಾರು ಮೂರು ದಶಕಗಳಿಂದ ಕಾಂಗ್ರೆಸ್‌ನಲ್ಲೇ ಇದ್ದ ಹಳೆಯ ತಲೆ ಸುನಿಲ್ ಜಾಖಡ್‌ಗೆ ಬಿಜೆಪಿ ರಾಜ್ಯಸಭಾ ಸದಸ್ಯತ್ವವನ್ನು ನೀಡುವ ಸಾಧ್ಯತೆ ಇದೆ.
Related Articles
Advertisement
ಇದರೊಂದಿಗೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎನ್ನುವ ಮತ್ತೊಂದು ಅಂಶವೂ ಪ್ರಸ್ತುತ ಬಿಜೆಪಿ ಚಾಲನೆ ಬಿಟ್ಟಿರುವ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಸರಿ ಸಮಾನವಾದುದಲ್ಲ. ಆದರೆ ಹೊಸ ತಲೆಮಾರಿನಲ್ಲಿ ಸಣ್ಣದೊಂದು ಅವಕಾಶದ ನಿರೀಕ್ಷೆ ಹುಟ್ಟಿಸಬಹುದು. ಇದೂ ಸಹ ಎಷ್ಟರಮಟ್ಟಿಗೆ, ಯಾವ್ಯಾವ ಹಂತದಲ್ಲಿ ಅನುಷ್ಠಾನ ವಾಗುತ್ತದೆಯೋ ಕಾದು ನೋಡಬೇಕು.
ಕಾಂಗ್ರೆಸ್‌ನ ಪ್ರಬಲ ಮತ ಬ್ಯಾಂಕ್‌ಗಳೇ ಇಂದು ಬೇರೆಯವರ ಪಾಲಾಗಿವೆ. ಇಂಥ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತಿತರ ವರ್ಗಗಳಿಗೆ ಪಕ್ಷದಲ್ಲಿನ ಅವಕಾಶಗಳ ಮೀಸಲು ಪ್ರಸ್ತಾವವೂ ಒಂದಿಷ್ಟು ಬದಲಾವಣೆಯನ್ನೂ ತರಬಹುದು. ಅದೂ ಸಹ ಅಂಶದ ಅನುಷ್ಠಾನದ ದಕ್ಷತೆಯಲ್ಲೇ. ಇದನ್ನು ಹೊರತುಪಡಿಸಿದಂತೆ ಕಾರ್ಯಕಾರಿ ಸಮಿತಿಗಳಲ್ಲಿ ಯುವ ಮುಖಗಳಿಗೆ ಅವಕಾಶ, ಬಿಜೆಪಿಯೊಂದಿಗೆ ಸೈದ್ಧಾಂತಿಕ ನೆಲೆಯಲ್ಲಿ ಹೋರಾಟದ ರೂಪುರೇಷೆ ಇತ್ಯಾದಿ ಸಂಗತಿಗಳೂ ಚರ್ಚಿತವಾಗಿ ಒಂದು ರೂಪ ಪಡೆದವು.
ಇದೆಲ್ಲದರ ಜತೆಗೆ ಪಕ್ಷದ ಸಂಪೂರ್ಣ ಪುನರ್‌ರಚನೆಯ ಸೊಲ್ಲು ಎತ್ತಿದ್ದ ಹಿರಿಯರಿಗೆ (ಜಿ23) ಸಣ್ಣದೊಂದು ಸಾಂತ್ವನ ಹೇಳಿ ತಟಸ್ಥಗೊಳಿಸಲಾಗಿದೆ. ಇದರಿಂದ ಹಿರಿಯರು ಸಂಪೂರ್ಣ ಸಮಾಧಾನವೇನೂ ಆಗಿಲ್ಲ. ಕಾಂಗ್ರೆಸ್‌ನ ನಾಯಕ ಹಾಗೂ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು 1991ರಲ್ಲಿ ಬರ್ಖಾಸ್ತುಗೊಳಿಸಿದ್ದ ಪಕ್ಷದ ಸಂಸದೀಯ ಮಂಡಳಿಯ ಪುನರ್ ಸ್ಥಾಪನೆ ಇವರ ಪ್ರಮುಖ ಬೇಡಿಕೆಯಾಗಿತ್ತು. ಅದನ್ನು ಒಪ್ಪದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಮತ್ತೂಂದು ಸಲಹಾ ಸಮಿತಿಯನ್ನು ನೇಮಿಸುವ ಸಲಹೆಯನ್ನು ಮುಂದಿಟ್ಟಿತು. ಅನಿವಾರ್ಯವಾಗಿ ಹಿರಿಯರು ಇದಕ್ಕೆ ಸಮ್ಮತಿಸಿದ್ದಾರೆ. ಪರಿಸ್ಥಿತಿ ತಟಸ್ಥವೆನಿಸಿರಬಹುದು. ಇದು ಹೀಗೆಯೇ ಮುಂದೆಯೂ ಇದ್ದೀತೆಂದು ಹೇಳಲಾಗದು.
ಇಷ್ಟೆಲ್ಲ ಆಗಿಯೂ ಚರ್ಚಿಸದ ಅಥವಾ ಹಾಗೆಯೇ ಉಳಿದ ಪ್ರಮುಖ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ವಿಷಯ. ಕೆಲವು ನಾಯಕರು ಮತ್ತೆ ರಾಹುಲ್ ಗಾಂಧಿಯ ಹೆಸರನ್ನೇ ಪ್ರಸ್ತಾವಿಸಿದ್ದಾರೆ. ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಬಿಜೆಪಿಯ ಪ್ರಬಲ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಎದುರಾಗಿ ಅಷ್ಟೇ ಪ್ರಬಲವಾದ ನಾಯಕನನ್ನು ರೂಪಿಸಲಾಗದಿದ್ದುದು.
ಬಿಜೆಪಿಯ ನರೇಂದ್ರ ಮೋದಿಗೆ ಇತಿಹಾಸದ ಕೊಂಡಿಯಾಗಲೀ ಕುಟುಂಬ ನಾಮಬಲದ ಬೆಂಬಲವಾಗಲೀ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಗಾಂಧಿ ಹೆಸರಿನ ನಾಮ ಬಲವಿದ್ದೂ ಮೋದಿಯ ಪ್ರಭಾವವನ್ನು ಕುಗ್ಗಿಸ ಲಾಗುತ್ತಿಲ್ಲ. ಇದು ಒಪ್ಪಿಕೊಳ್ಳಲು ಸ್ವಲ್ಪ ಕಹಿ ಎನಿಸಿದರೂ ಒಪ್ಪಲೇಬೇಕಾದ ಸತ್ಯವೂ ಹೌದು. ಈ ಸಂಗತಿ ಕುರಿತು ಚರ್ಚೆ ನಡೆಯಬೇಕಿತ್ತು. ಒಂದು ವೇಳೆ ಏಕ ವ್ಯಕ್ತಿ/ಪಕ್ಷದ ನೆಲೆಯಲ್ಲಿ ಸಾಧ್ಯವಿಲ್ಲವಾದರೆ ಸಂಘಟನಾತ್ಮಕ ನೆಲೆಯಲ್ಲಾದರೂ (ತೃತೀಯ ರಂಗ ಇತ್ಯಾದಿ) ಮೋದಿಯನ್ನು ಕಟ್ಟಿ ಹಾಕಲು ಸಾಧ್ಯವೇ ಎಂದು ಯೋಚಿಸಬೇಕಿತ್ತು. ಈ ತೀರ್ಮಾನ 2024ರ ಲೋಕಸಭೆ ಚುನಾವಣೆಗೆ ಅಗತ್ಯವಿತ್ತು. ಅದು ಸಾಧ್ಯವಾಗಲೇ ಇಲ್ಲ.
ಕಾಂಗ್ರೆಸ್ ಮೊದಲು ಮಾಡಬೇಕಿರುವುದು ಕಳೆದು ಹೋದ ಮುಖಬೆಲೆಯನ್ನು ವಾಪಸು ಗಳಿಸುವುದು. ಅದಕ್ಕೆ ನಾಯಕತ್ವದ ಪ್ರಶ್ನೆಯೇ ಬಹಳ ಮುಖ್ಯ. ಅದು ಸರಿ ಹೋಗದೇ ಉಳಿದೆಲ್ಲವೂ ಅಷ್ಟೇ ಸಮರ್ಪಕವಾಗಿ, ನಾವಂದುಕೊಂಡ ರೀತಿಯಲ್ಲೇ ಸಾಗುತ್ತದೆ ಎಂದು ಹೇಳಲಾಗದು.
ಆನೆಯೊಂದು ಸದಾ ಓಡುತ್ತಿರಬೇಕೆಂದೇನೂ ಇಲ್ಲ; ಆದರೆ ನಡೆಯುತ್ತಲೇ ಇರಬೇಕು. ನಡೆಯುತ್ತಿರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಒಮ್ಮೆ ಕುಳಿತರೆ ಅದನ್ನು ಏಳಿಸುವುದು ಕುಂಭಕರ್ಣನನ್ನು ನಿದ್ದೆಯಿಂದ ಏಳಿಸಿದಂತೆಯೇ ಮಹಾ ಪ್ರಯಾಸ. ಆನೆ ಕುಳಿತರೆ ಏಳಿಸಲು ಮತ್ತೆ ಎಪ್ಪತ್ತು ವರ್ಷ ಬೇಕಾದೀತು!ಕಾಂಗ್ರೆಸ್ ಸಹ ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆನೆಯೇ. ಈಗ ನಡೆಯುತ್ತಿದೆಯೋ ನಡೆದಂತೆ ತೋರು ತ್ತಿದೆಯೋ ಎಂಬುದು ಸ್ಪಷ್ಟವಾಗಬೇಕಿದೆ. ಆ ಶಕ್ತಿ ಕಾಂಗ್ರೆಸ್‌ನ ಪ್ರತೀ ಹಂತದ ನಾಯಕರಲ್ಲಿದೆ. ಅದು ಸರಿಹೋಗಬೇಕೆಂದರೆ ಆಂತರಿಕ ಚುನಾವಣೆಯೊಂದೇ ಮದ್ದು. ಅದಾಗದಿದ್ದರೆ ಆನೆ ನಡೆಯುವುದು ಕಷ್ಟವಾದೀತು. ಅದಾಗದಿದ್ದರೆ ಆನೆ ನಡೆಯುವುದು ಕಷ್ಟವಾದೀತು. - ಅರವಿಂದ ನಾವಡ