Advertisement

Congress ರಾಜಸ್ಥಾನ ವಿಧಾನಸಭೆ ಚುನಾವಣೆ: 80 ಶಾಸಕರಿಗೆ ಟಿಕೆಟ್‌ ಇಲ್ವಂತೆ!

05:54 PM Sep 19, 2023 | Team Udayavani |

ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಚರಾಜ್ಯಗಳನ್ನು ಗೆಲ್ಲಲು ಕಾಂಗ್ರೆಸ್‌ ತಂತ್ರ ಹೆಣೆಯುತ್ತಿದೆ. ಇದರ ನಡುವೆಯೇ, ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶಾಸಕರಿಗೆ ಟಿಕೆಟ್‌ ಕೊಡಬಾರದು ಎಂದು ಪಕ್ಷ ನಿರ್ಧರಿಸಿದೆಯಂತೆ!

Advertisement

ಹಾಗಾದರೆ ಅಂಥ ಶಾಸಕರು ಎಷ್ಟಿರಬಹುದು? ರಾಜ್ಯದಲ್ಲಿ ಪಕ್ಷದ ವಿರುದ್ಧ ಅಥವಾ ಸಿಎಂ ಗೆಹ್ಲೋಟ್ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಆದರೆ, ಸುಮಾರು 80 ಕ್ಷೇತ್ರಗಳಲ್ಲಿ ಶಾಸಕರ ಬಗ್ಗೆ ಜನರಿಗೆ ತೀವ್ರ ಅಸಮಾಧಾನವಿದೆ ಎಂದು ಎರಡು ಸಂಸ್ಥೆಗಳ ಮೂಲಕ ಕಾಂಗ್ರೆಸ್‌ ನಡೆಸಿರುವ 6 ಆಂತರಿಕ ಸಮೀಕ್ಷೆಗಳಲ್ಲಿ ತಿಳಿದುಬಂದಿದೆ. ಹೀಗಾಗಿ, ಈ ಕ್ಷೇತ್ರಗಳಲ್ಲಿ ಹಳಬರಿಗೆ ಕೊಕ್‌ ನೀಡಿ, ಹೊಸ ಮುಖಗಳನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎನ್ನಲಾಗಿದೆ.

“ಗೆಲ್ಲುವ ಸಾಮರ್ಥ್ಯವೊಂದೇ ಟಿಕೆಟ್‌ನ ಮಾನದಂಡ’ ಎಂದು ಈಗಾಗಲೇ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಘೋಷಿಸಿರುವುದು ಕೂಡ ಈ ವದಂತಿಗೆ ಪುಷ್ಟಿ ನೀಡಿದೆ. ಅಲ್ಲದೇ, ಇತ್ತೀಚೆಗೆ ನಡೆದ ಸಭೆಯಲ್ಲಿ ಸಿಎಂ ಗೆಹ್ಲೋಟ್ ಕೂಡ, “ಟಿಕೆಟ್‌ ವಂಚಿತರ ಆಕ್ರೋಶದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿದ್ದರಂತೆ.

ಬಿಜೆಪಿಯಿಂದ ಕಾದು ನೋಡೋ ತಂತ್ರ
ಮುಂದಿನ ವರ್ಷದ ಆಂಧ್ರಪ್ರದೇಶ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಕಳೆದ ವಾರವಷ್ಟೇ ಜನ ಸೇನಾ ಪಾರ್ಟಿ(ಜೆಎಸ್‌ಪಿ) ನಾಯಕ ಪವನ್‌ ಕಲ್ಯಾಣ್‌ ಘೋಷಿಸಿದ್ದಾರೆ. ಅಲ್ಲದೇ, ನಾವು ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಬೆಳವಣಿಗೆಗಳ ಬಗ್ಗೆ ತುಟಿ ಬಿಚ್ಚಿಲ್ಲ. ಟಿಡಿಪಿ-ಜೆಎಸ್‌ಪಿ ಮೈತ್ರಿಯೊಂದಿಗೆ ಬಿಜೆಪಿಯೂ ಸೇರಿಕೊಳ್ಳಲಿದೆ ಎನ್ನುವ ನಂಬಿಕೆಯಲ್ಲಿ ಪವನ್‌ ಕಲ್ಯಾಣ್‌ ಇದ್ದಾರೆ. ಆದರೆ, ಬಿಜೆಪಿ ಯಾವುದೇ ನಿರ್ಧಾರಕ್ಕೆ ಬರದಂಥ ಸ್ಥಿತಿಗೆ ತಲುಪಿದೆ. ಆಂಧ್ರದಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲ. ಬಿಜೆಪಿ ಕೇಂದ್ರ ನಾಯಕತ್ವವು ಟಿಡಿಪಿ ವಿಶ್ವಾಸಾರ್ಹ ಮಿತ್ರಪಕ್ಷವಲ್ಲ ಎಂಬುದನ್ನು ಅರಿತಿದೆ. ಆದರೆ, ಟಿಡಿಪಿ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ಯಾವುದೇ ಸೀಟು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಜಗನ್‌ ರೆಡ್ಡಿ ವಿಶ್ವಾಸಾರ್ಹ ವ್ಯಕ್ತಿಯಾದರೂ, ಅವರು ಎನ್‌ಡಿಎಗೆ ಸೇರಲ್ಲ. 2024ರ ಲೋಕಸಭೆ ಚುನಾವಣೆ ಬಳಿಕ ವೈಎಸ್ಸಾರ್‌ ಕಾಂಗ್ರೆಸ್‌ನ ಅಗತ್ಯ ಬಂದರೂ ಬರಬಹುದು. ಹೀಗಾಗಿ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಿದೆ.

ಬಿಆರ್‌ಎಸ್‌ಗೆ “ಗ್ಯಾರಂಟಿ’ ಭಯ
ಕರ್ನಾಟಕದಲ್ಲಿ “ಗ್ಯಾರಂಟಿ’ಗಳು ಕಾಂಗ್ರೆಸ್‌ನ ಕೈ ಹಿಡಿದ ಬೆನ್ನಲ್ಲೇ ತೆಲಂಗಾಣದಲ್ಲೂ ಪಕ್ಷವು ಬಂಪರ್‌ ಗ್ಯಾರಂಟಿಗಳನ್ನು ಘೋಷಿಸಿದೆ. ಇವುಗಳೇನಾದರೂ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಬಹುದೋ, ಮತಗಳು ಕೈ ಬುಟ್ಟಿಗೆ ಸೇರಬಹುದೋ ಎಂಬ ಆತಂಕ ಈಗ ತೆಲಂಗಾಣದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್‌)ಗೆ ಶುರುವಾಗಿದೆಯಂತೆ. ಸೋನಿಯಾಗಾಂಧಿ ಅವರು ಗ್ಯಾರಂಟಿ ಘೋಷಿಸಿದ ಬೆನ್ನಲ್ಲೇ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ ಅವರು ಮಾಡಿರುವ ಟ್ವೀಟ್‌ ಇದಕ್ಕೆ ಸಾಕ್ಷಿ. “ತೆಲಂಗಾಣದ ಜನರು ಬುದ್ಧಿವಂತರು. ಅವರು ಸುಳ್ಳು ಮತ್ತು ಮೋಸದ ಗ್ಯಾರಂಟಿಗಳನ್ನು ನಂಬುವುದಿಲ್ಲ’ ಎಂದು ಕೆಟಿಆರ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ, “ದೆಹಲಿಯ ಕೈಗೊಂಬೆಗಳು’ ರಾಜ್ಯದಲ್ಲಿ ಅಧಿಕಾರಕ್ಕೇರಿದರೆ, ತೆಲಂಗಾಣದ ಸ್ವಾಭಿಮಾನವನ್ನು ಅಡವಿಡುವುದೂ ಗ್ಯಾರಂಟಿ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ನಾಯಕರನ್ನು “ರಣಹದ್ದುಗಳು’, “ರಾಕ್ಷಸರು’, “ಗೋಸುಂಬೆಗಳು’ ಎಂದೆಲ್ಲ ಕರೆದಿದ್ದಾರೆ. ರಾಜ್ಯವೆಲ್ಲಿ ಕೈತಪ್ಪಿ ಹೋಗುವುದೋ ಎಂಬ ಭೀತಿ ಕೆಸಿಆರ್‌, ಕೆಟಿಆರ್‌ಗೆ ಕಾಡುತ್ತಿರುವುದಕ್ಕೆ ಈ ಎಲ್ಲ ಪದಗಳೇ ಸಾಕ್ಷಿ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next