Advertisement

ಪಾದಯಾತ್ರೆಗೆ ಲಾಕ್‌? ಕನಕಪುರದಲ್ಲಿ ರೆಸಾರ್ಟ್‌ ಮುಚ್ಚುವಂತೆ ಪೊಲೀಸರ ಆದೇಶ

09:13 AM Jan 07, 2022 | Team Udayavani |

ರಾಮನಗರ/ಬೆಂಗಳೂರು : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಜ. 9ರಿಂದ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಈಗ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆಯ ಸಮರವಾಗಿ ಮಾರ್ಪಾಡಾಗಿದೆ.

Advertisement

ಕೊರೊನಾ ಕಠಿನ ನಿಯಮಗಳ ಜಾರಿಯ ನಡುವೆಯೂ ಪಾದಯಾತ್ರೆಯನ್ನು ನಡೆಸಿಯೇ ತೀರುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಪಾದಯಾತ್ರೆಗೆ ಅನುಮತಿ ಇಲ್ಲ, ಒಂದು ವೇಳೆ ಮಾಡಿದರೆ ನಾಯಕರನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕನಕಪುರ ನಗರ ಪೊಲೀಸರು ಗುರುವಾರ ಸೂಚನೆಯೊಂದನ್ನು ಹೊರಡಿಸಿರುವುದು ಕಾಂಗ್ರೆಸ್‌ ನಾಯಕರನ್ನು ಕೆರಳಿಸಿದೆ. ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪಬ್‌, ಹೊಟೇಲ್‌, ಬಾರ್‌, ರೆಸ್ಟೋರೆಂಟ್‌, ರೆಸಾರ್ಟ್‌ಗಳನ್ನು
ಮುಚ್ಚುವಂತೆ ಪೊಲೀಸರು ಸೂಚಿಸಿದ್ದಾರೆ. ಹಾಗೊಮ್ಮೆ ನಿಯಮ ಉಲ್ಲಂ ಸಿದರೆ ಕಾನೂನು ರೀತ್ಯಾ ಸೂಕ್ತ ಕ್ರಮ ಜರಗಿಸುವುದಾಗಿಯೂ ಎಚ್ಚರಿಸಿದ್ದಾರೆ.

ಈ ಆದೇಶದ ವಿರುದ್ಧ ಕಿಡಿಕಾರಿರುವ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, “ಪಾದಯಾತ್ರೆ ತಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಂಗಮದಲ್ಲಿ ಹೊಟೇಲ್‌ ಬುಕ್‌ ಮಾಡಿದ್ದೆವು, ಈಗ ಅವರಿಗೆ ಹೆದರಿಸಿ ಹೊಟೇಲನ್ನು ಮುಚ್ಚಿಸುತ್ತಿದ್ದಾರೆ. ಹೊಟೇಲ್‌ ಇಲ್ಲದಿದ್ದರೂ ನಾವೆಲ್ಲಿರುತ್ತೇವೋ ಅಲ್ಲೇ ಮಲಗುತ್ತೇವೆ. ಐದು ಸಾವಿರ ಹಾಸಿಗೆ ಬುಕ್‌ ಮಾಡಿದ್ದೇವೆ’ ಎಂದಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಪಾದಯಾತ್ರೆ ತಡೆಯಲು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೂಂದು ಜನ್ಮ ಹುಟ್ಟಿ ಬರಬೇಕು. ನಾವು 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಯಾರನ್ನು ಹೆದರಿಸುತ್ತೀರಿ? ನಾನು, ಸಿದ್ದರಾಮಯ್ಯ ಇಬ್ಬರೇ ಆದರೂ ಸರಿ ಯಾತ್ರೆ ಮಾಡಿಯೇ ತೀರುತ್ತೇವೆ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಯಾಕೆ ಯೋಜನೆ ಜಾರಿ ಮಾಡಲಿಲ್ಲ? ಅವರ ಅವಧಿಯಲ್ಲೇ 4ಜಿ ವಿನಾಯಿತಿ ಪಡೆಯಲಾಯಿತು. ಆದರೂ ಟೆಂಡರ್‌ ಕರೆಯಲು ಐದು ವರ್ಷ ಬೇಕಾ? ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಈಗ ಕಾವೇರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ.
– ಗೋವಿಂದ ಕಾರಜೋಳ, ಸಚಿವ

ಕಾರಜೋಳ ಅವರು ಬಿಜೆಪಿ ಸರಕಾರ ಏನು ಮಾಡಿತು ಎಂದು ಹೇಳಿಲ್ಲ. ಅದು ಬಿಟ್ಟು ಎಲ್ಲವೂ ಹೇಳಿದ್ದಾರೆ. ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್‌ ಅಧಿಕಾರಕ್ಕೆ ಬರುವವರೆಗೂ ಏನೂ ಆಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಅನಂತರವೇ ಚಾಲನೆ ಸಿಕ್ಕಿದ್ದು. ಇದು ಗೊತ್ತಿದ್ದರೂ ಕಾರಜೋಳ ಸುಳ್ಳು ಹೇಳಿದ್ದಾರೆ.
– ಸಿದ್ದರಾಮಯ್ಯ, ಮಾಜಿ ಸಿಎಂ

ಡಿಕೆಶಿ ಅವರು ಬಿಡಿ, ನನ್ನ ಸ್ನೇಹಿತರು. ಸೂರ್ಯ, ಚಂದ್ರ ಇವೆಲ್ಲ ಡೈಲಾಗ್‌ ನೋಡಿದ್ದೇವೆ. ಆದರೆ ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದವರು. ಕಾನೂನು ಸುವ್ಯವಸ್ಥೆ ಮುಖ್ಯಸ್ಥರಾಗಿದ್ದವರು. ಅವರು ಸರಕಾರದ ಮಾರ್ಗಸೂಚಿ ಪಾಲಿಸುತ್ತಾರೆ ಎಂಬ ನಂಬಿಕೆ-ವಿಶ್ವಾಸ ನನ್ನದು. ಇಷ್ಟಾದರೂ ಒಪ್ಪದಿದ್ದರೆ ಕಾನೂನು ಇದೆ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next