Advertisement

ಹಿಡಿತ ಸಾಧಿಸಲು ಹೊರಟ ಸಿದ್ಧು ವಿರುದ್ಧ ಮೂಲ ಕಾಂಗ್ರೆಸ್ಸಿಗರ ಆಕ್ರೋಶ

01:13 AM Mar 18, 2019 | Team Udayavani |

ಬೆಂಗಳೂರು: ಸೀಟು ಹಂಚಿಕೆ ವಿಚಾರದಲ್ಲಿ ಮೈಸೂರು ಉಳಿಸಿಕೊಂಡು ಪಕ್ಷದಲ್ಲಿ ಪ್ರಾಬಲ್ಯ ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ತಮ್ಮ ಆಪ್ತರಿಗೆ ಹೆಚ್ಚಿನ ಸ್ಥಾನ ಕೊಡಿಸಿ, ಪಕ್ಷದಲ್ಲಿ ತಮ್ಮ ಹಿಡಿತ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯದ ಸೂತ್ರದ ಪ್ರಕಾರ ಸೀಟು ಹಂಚಿಕೆಯಾಗುವು ದರಿಂದ ಅಹಿಂದ ವರ್ಗದ ಲೆಕ್ಕಾಚಾರದಲ್ಲಿ ನಾಲ್ವರು ಕುರುಬ ಸಮುದಾಯ ದ ವರಿಗೆ ಟಿಕೆಟ್‌ ಕೊಡಿಸುವ ಪ್ರಸ್ತಾಪ ವನ್ನು ಹೈಕಮಾಂಡ್‌ ಮುಂದೆ ಇಟ್ಟಿದ್ದು, ಇತರ ಹಿಂದುಳಿದ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿದೆ. ಜತೆಗೆ, ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ಟಿಕೆಟ್‌ ಆಕಾಂಕ್ಷಿಗಳ ಮೇಲೂ ಇದು ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿದೆ. ಮೈಸೂರು, ದಾವಣಗೆರೆ, ಹಾವೇರಿ ಹಾಗೂ ಕೊಪ್ಪಳ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿಸಲು ಸಿದ್ದರಾಮಯ್ಯ ಕಾರ್ಯತಂತ್ರನಡೆಸಿದ್ದಾರೆ. ಮೈಸೂರಿನಲ್ಲಿ ಬಿಜೆಪಿಯಿಂದ ಕರೆ ತಂದಿರುವ ವಿಜಯಶಂಕರ್‌, ದಾವಣಗೆರೆಯಲ್ಲಿ ತಮ್ಮ ಆಪ್ತ ಎಚ್‌.ಎಂ.ರೇವಣ್ಣ, ಹಾವೇರಿಯಲ್ಲಿ ಮಾಜಿ ಶಾಸಕ ಬಸವರಾಜ್‌ ಶಿವಣ್ಣನವರ್‌, ಕೊಪ್ಪಳದಲ್ಲಿ ಮಾಜಿ ಸಂಸದ ವಿರೂಪಾಕ್ಷಪ್ಪ ಅಥವಾ ಮಾಜಿ ಶಾಸಕ ಬಸವರಾಜ್‌ ಹಿಟ್ನಾಳ್‌ ಅವರಿಗೆ ಟಿಕೆಟ್‌ ಕೊಡಿಸುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ. ಮೈಸೂರಿನಲ್ಲಿ ಒಕ್ಕಲಿಗರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಇದ್ದು, ಹಿಂದುಳಿದ ವರ್ಗದವರ ಕೋಟಾದಡಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ ಸೂರಜ್‌ ಹೆಗಡೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬದಲಾಗುವ ಲೆಕ್ಕಾಚಾರ: ಸಿದ್ದರಾಮಯ್ಯನವರು ಹಿಂದುಳಿದ ಕೋಟಾದಡಿ ಕುರುಬ ಸಮುದಾಯಕ್ಕೆ ಕೇಳಿರುವ ಮೂರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದವರೇ ಆಕಾಂಕ್ಷಿಗಳಾಗಿ ದ್ದಾರೆ. ಕುರುಬ ಸಮುದಾಯಕ್ಕೆ ಮಣೆ ಹಾಕಿದರೆ ತಮಗೆ ಟಿಕೆಟ್‌ ತಪ್ಪಬಹುದೆಂಬ ಆತಂಕ ಲಿಂಗಾಯತ ಸಮುದಾಯದ ಆಕಾಂಕ್ಷಿಗಳಲ್ಲಿ ಕಾಡುತ್ತಿದೆ. ಹಿಂದುಳಿದ ವರ್ಗದ ಹೆಸರಿನಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಉಳಿದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾ ಗುತ್ತದೆ. ವಾಸ್ತವವಾಗಿ ಲಿಂಗಾ ಯತ ಸಮುದಾಯ ಹಾಗೂ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಕ್ಷೇತ್ರಗಳು ಸಿಗಬೇಕಿದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಈ ಮಧ್ಯೆ, ಲಿಂಗಾಯತ ಸಮುದಾಯದವರು ಎಂಟು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಾವೇರಿ ಹಾಗೂ ಬೀದರ್‌ ಕ್ಷೇತ್ರಗಳ ಮೇಲೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರೂ ಬೇಡಿಕೆ ಇಟ್ಟಿದ್ದಾರೆ.

ಬೀದರ್‌ನಲ್ಲಿ ಲಿಂಗಾಯತ ಸಮುದಾಯದವರಿಗೆ ಅವಕಾಶ ನೀಡಿ ದರೆ, ಅಲ್ಲಿ ಹಿಂದುಳಿದ ವರ್ಗದ ಕೋಟಾದಡಿ ಬೇಡಿಕೆ ಇಟ್ಟಿರುವ ಧರ್ಮಸಿಂಗ್‌ ಪುತ್ರ ವಿಜಯ್‌ ಧರ್ಮಸಿಂಗ್‌ ಹಾಗೂ ಮುಸ್ಲಿಂ ಸಮುದಾಯದಡಿ ಬೇಡಿಕೆ ಇಟ್ಟಿರುವ ಮಾಜಿ ಸಚಿವ ಸಿ.ಎಂ ಇಬ್ರಾಹಿಂಗೆ ಅವಕಾಶ ಕೈ ತಪ್ಪಲಿದೆ.

ಕೊಪ್ಪಳ ಹಾಗೂ ಹಾವೇರಿಯಲ್ಲಿಯೂ ಕುರುಬರಿಗೆ ಅವಕಾಶ ಕಲ್ಪಿಸಿದರೆ, ಲಿಂಗಾಯತ ಸಮುದಾಯದವರಿಗೆ ಅವಕಾಶ ಕೈ ತಪ್ಪಲಿದೆ. ಬೆಳಗಾವಿಯಲ್ಲಿ ಲಿಂಗಾಯತರಿಗೆ ಅವಕಾಶ ಕಲ್ಪಿಸುವುದು ಸಿದ್ದರಾಮಯ್ಯನವರ ಲೆಕ್ಕಾಚಾರ. ಆದರೆ, ಅದರಿಂದ ಹಿಂದುಳಿದ ವರ್ಗದ ಮರಾಠಾ ಸಮುದಾಯಕ್ಕೆ ಟಿಕೆಟ್‌ ಕೈ ತಪ್ಪಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾವೇರಿಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ತಪ್ಪಿದರೆ, ಪರ್ಯಾಯವಾಗಿ ಅಲ್ಪಸಂಖ್ಯಾತರಿಗೆ ಧಾರವಾಡಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಆಲೋಚನೆಯಿದೆ.ಅಲ್ಲಿಯೂ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್‌ ಕೊಡಬೇಕೆಂಬ ಬೇಡಿಕೆ ಇದೆ.

Advertisement

ಅನುಕೂಲಕ್ಕೆ ತಕ್ಕಂತೆ ಬಳಕೆ: ಆರೋಪ

ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಲೆಕ್ಕಾಚಾರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆಂಬ ಆರೋಪ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ಸೀಟು ಹಂಚಿಕೆವಿಷಯದಲ್ಲಿಯೂ ಪಕ್ಷ ಗೆಲ್ಲುವ ಸಾಧ್ಯತೆ ಇದ್ದ ತುಮಕೂರು ಬಿಟ್ಟು ಕೊಟ್ಟು ಮೈಸೂರಿಗೆ ಪಟ್ಟು ಹಿಡಿದು ಪಕ್ಷದಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂಬುದು ಮೂಲ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌: ಕೈ ನಾಯಕರ ಜತೆ ಸಭೆ ಇಂದು

ಬೆಂಗಳೂರು: ಜೆಡಿಎಸ್‌ನಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸೋಮವಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವೆ ಚರ್ಚೆ ನಡೆಯಲಿದೆ.ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ ನಾಯಕರ ವಿಶ್ವಾಸ ಗಳಿಸಿಯೇ ತೀರ್ಮಾನ ಕೈಗೊಳ್ಳಲು ದೇವೇಗೌಡರು ನಿರ್ಧರಿಸಿದ್ದು ಅದರಂತೆ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಡಾ.ಜಿ.ಪರಮೇಶ್ವರ್‌ ಜತೆ ಚರ್ಚಿಸಲಿದ್ದಾರೆಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸ್ಪರ್ಧೆ ಮಾಡಲಿರುವ ಕ್ಷೇತ್ರವೂ ಅಂತಿಮಗೊಳ್ಳಲಿದೆ.

ಎಚ್‌.ಡಿ.ದೇವೇಗೌಡರು ತುಮಕೂರು ಹಾಗೂ ಬೆಂಗಳೂರು ಉತ್ತರ ಎರಡೂ ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡಬೇಕೆಂಬ ಒತ್ತಡವೂ ಇದೆ. ಆದರೆ, ಗೌಡರು ಇದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಮಾರ್ಚ್‌ 19ಕ್ಕೆ ನಿಗದಿಯಾಗಿದ್ದು, ಅಂದಿನ ತೀರ್ಮಾನ ನೋಡಿ ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹೊಂದಾಣಿಕೆ ಜತೆಗೆ ಅಭ್ಯರ್ಥಿಗಳ ಆಯ್ಕೆಯೂ ಕಗ್ಗಂಟಾಗಿ ಪರಿಣಮಿಸಿದ್ದು, ಹೈಕಮಾಂಡ್‌ ಮಧ್ಯಪ್ರವೇಶ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮೈಸೂರಲ್ಲಿ ದಿಢೀರ್‌ ಸಭೆ
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಹಠಕ್ಕೆ ಬಿದ್ದು ಕೈ ಪಾಲು ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿ ಸಲು ಮೈಸೂರಿನ ತಮ್ಮ ನಿವಾಸದಲ್ಲಿ ನಗರದ ಸ್ಥಳೀಯ ಮುಖಂಡರ ದಿಢೀರ್‌ ಸಭೆ ನಡೆಸಿದರು. ಎರಡು ದಿನಗಳ ಹಿಂದಷ್ಟೇ ಹುಣಸೂರು, ಪಿರಿಯಾ ಪಟ್ಟಣ ಕ್ಷೇತ್ರಗಳ ಮಾಜಿ ಶಾಸಕರ ಜತೆ ಸಭೆ ನಡೆಸಿದ್ದ ಸಿದ್ದರಾಮಯ್ಯ, ಭಾನುವಾರ,ಮೈಸೂರು ನಗರದ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್‌, ವಾಸು ಅವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಸಂಭಾವ್ಯ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಹಾಜರಿದ್ದರು.

ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next