ಮೈಸೂರು: ಮೈಸೂರು ನಗರ ರೈಲು ನಿಲ್ದಾಣ ಸಮೀಪ ನೂತನವಾಗಿ ನಿರ್ಮಿಸಿರುವ ಕಾಂಗ್ರೆಸ್ ಕಚೇರಿ ಕಟ್ಟಡವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಕಚೇರಿ ಕಟ್ಟಡ ಉದ್ಘಾಟನೆ ನಂತರ ಅಲ್ಪ$ಸಂಖ್ಯಾತ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಪರಮೇಶ್ವರ್, ಕಾಂಗ್ರೆಸ್ ಪಕ್ಷ ನಿಮ್ಮನ್ನು ಆದರ್ಶ ಪುರುಷನಂತೆ ಕಾಣುತ್ತಿದೆ. ಈ ಜಾಗದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗೆ ಭವ್ಯ ಕಟ್ಟಡ ಕಟ್ಟಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಜಾಗದಲ್ಲಿ ಶಾಶ್ವತ ಕಾಂಗ್ರೆಸ್ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ರೈಲು ನಿಲ್ದಾಣ ಸಮೀಪದ ಎರಡು ಎಕರೆ ಪ್ರದೇಶವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು.
ಜಾಗದ ವಿವಾದ ಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ಹಲವಾರು ಕಾರಣಗಳಿಂದ ಕಟ್ಟಡ ನಿರ್ಮಾಣವಾಗಿರಲಿಲ್ಲ. ದೇವರಾಜ ಮಾರುಕಟ್ಟೆಯ ಒಂದು ಪಾರ್ಶ್ವ ಕುಸಿದು ಬಿದ್ದ ನಂತರ ಇಡೀ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸಿ
ಬದಲಿ ಕಟ್ಟಡ ನಿರ್ಮಾಣಕ್ಕೆ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಮಾರುಕಟ್ಟೆ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿಯನ್ನು ಸ್ಥಳಾಂತರಿಸಲೇಬೇಕಾದ ಅನಿವಾರ್ಯತೆಯಿಂದಾಗಿ ರೈಲು ನಿಲ್ದಾಣ ಸಮೀಪದ ಸುಮಾರು ಎರಡು ಎಕರೆ ಪ್ರದೇಶದ ಒಂದು ಮೂಲೆಯಲ್ಲಿ ತಾತ್ಕಾಲಿಕ ಕಟ್ಟಡ ಕಟ್ಟಲಾಗಿದೆ.