Advertisement

ಕಾಂಗ್ರೆಸ್‌ ಹಿಂದುಳಿದವರ ಉದ್ಧಾರ ಮಾಡಿಲ್ಲ: ಕೆ.ಎಸ್‌. ಈಶ್ವರಪ್ಪ

05:45 PM Oct 05, 2021 | Team Udayavani |

ಕಲಬುರಗಿ: ದೇಶದಲ್ಲಿ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರನ್ನು ಮತಕ್ಕಾಗಿ ಕಾಂಗ್ರೆಸ್‌ ದುರುಪಯೋಗ ಮಾಡಿಕೊಂಡಿದೆ ಹೊರತು, ಅವರ ಉದ್ಧಾರಕ್ಕಾಗಿ ಏನೇ ಏನೂ ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ಧಾಳಿ ನಡೆಸಿದರು.

Advertisement

ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಮತ್ತು ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಮೊದಲು ಬಿಜೆಪಿ ಎಂದರೆ ಬ್ರಾಹ್ಮಣ ಪಕ್ಷ ಎನ್ನುತ್ತಿದ್ದರು. ಬಿಜೆಪಿಗೆ ಯಾರೂ ಬರುತ್ತಿರಲಿಲ್ಲ. ಆದರೆ, ಇವತ್ತು ಎಲ್ಲ ವರ್ಗದ ಜನರನ್ನು ಬಿಜೆಪಿ ತಲುಪಿದೆ. ಯಾವತ್ತೂ ಹಿಂದುತ್ವದ ಅಜೆಂಡಾ ಮೇಲೆಯೇ ನಡೆದುಕೊಂಡ ಪಕ್ಷ ನಮ್ಮದು. ಯಾವುದೇ ಹಳ್ಳಿಗೆ ಹೋದರೂ, ನರೇಂದ್ರ ಮೋದಿ ಮತ್ತು ಬಿಜೆಪಿ ಎಂದೇ ಜನ ಹೇಳುತ್ತಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಯಾರು ಹೋಗುವವರೇ ಇಲ್ಲ. ಆ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದರು. ದೇಶದ ರಾಜ್ಯಗಳಲ್ಲಿ ಕಾಂಗ್ರೆಸ್‌ ಎರಡು ಗುಂಪಾಗಿ ಒಡೆದು ಹೋಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಬಡಿದಾಡಿಕೊಳ್ಳುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆದರೆ, ಈಗಲೇ ಇಬ್ಬರೂ ನಾಯಕರು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲು ಚುನಾವಣೆಯಲ್ಲಾದರೂ ಇವರು ಗೆದ್ದು ಬರಲಿ ಎಂದು ಕುಟುಕಿದರು.

ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಇಷ್ಟು ಆಡಳಿತ ನಡೆಸಿದರೂ ದಲಿತರು, ಹಿಂದುಳಿದ ವರ್ಗದವರ ಉದ್ಧಾರಕ್ಕಾಗಿ ಏನೂ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಅವರನ್ನು ಮತಕ್ಕಾಗಿ ಬಳಕೆ ಮಾಡಿಕೊಂಡಿದೆ. ಆದರೆ ಅವರು ದಡ್ಡರಲ್ಲ. ಕಾಂಗ್ರೆಸ್‌ಗೆ ಎಷ್ಟು ದಿನ ಅಂತಾ ಕೊಡಬೇಕೆಂದು ಆ ಪಕ್ಷದಿಂದ ದೂರು ಆಗುತ್ತಿದ್ದಾರೆ. ಹಿಂದುಳಿದ ಕೋಲಿ ಸಮಾಜವನ್ನು ಎಸ್‌ಟಿ ಸೇರ್ಪಡೆಗೆ ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಅದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಇದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ 20 ದಲಿತ ಹಾಗೂ 27 ಹಿಂದುಳಿದ ಸಮುದಾಯಗಳ ಸಂಸದರನ್ನು ಸಚಿವರನ್ನಾಗಿ ಮಾಡಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ನಂತರದ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶೋಷಿತ ಸಮುದಾಯಗಳಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಅದೇ ರೀತಿ ರೈತರಿಗೆ ಮೋದಿ ವರ್ಷಕ್ಕೆ ಆರು ಸಾವಿರ ರೂ. ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ರೈತರಿಗಾಗಿ ಎಂಟಾಣೆಯೂ ಕೊಡಲು ಆಗಿಲ್ಲ ಎಂದು ಟೀಕಿಸಿದರು.

Advertisement

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ನಮ್ಮ ಪಕ್ಷದಲ್ಲಿ ತೆರೆ-ಮರೆಯಲ್ಲಿ ಹಿಂದಳಿದ ವರ್ಗದ ಸಾಕಷ್ಟು ಜನರ ದುಡಿಯುತ್ತಿದ್ದಾರೆ. ಅವರನ್ನು ಗುರುತಿಸಿ ಅವರಿಗೆ ಸ್ಥಾನ-ಮಾನ ಸಿಗುವ ಕೆಲಸವಾಗಬೇಕೆಂದು ಹೇಳಿದರು. ಹಿಂದುಳಿದ ವರ್ಗಗಳ ಮೋರ್ಚಾದ ರಾಜಾಧ್ಯಕ್ಷ ನರೇಂದ್ರ ಬಾಬು ಮಾತನಾಡಿ, ಪ್ರತಿ ತಿಂಗಳಲ್ಲಿ 15 ದಿನ ಪ್ರವಾಸ ಮಾಡಬೇಕೆಂದು ವರಿಷ್ಠರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಈಗಾಗಲೇ ಕೆಲಸ ಮಾಡುತ್ತಿದ್ದೇನೆ. ಜತೆಗೆ ಎಲ್ಲ ಪದಾಧಿಕಾರಿಗಳ ಸಭೆ ಮಾಡುತ್ತಿದ್ದೇನೆ ಎಂದರು.

ಕೃಷ್ಣ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ಪಕ್ಷದಲ್ಲಿ ಹಿಂದುಳಿದ ವರ್ಗದ ಘಟಕ ಆರಂಭಿಸಬೇಕೆಂದು ಎರಡೂವರೆ ದಶಕಗಳ ಹಿಂದೆ ಮುಖಂಡರೆಲ್ಲ ಸೇರಿ ಬೇಡಿಕೆ ಇಟ್ಟಿದ್ದವು. ಇದರ ಪರಿಣಾಮ ಕರ್ನಾಟಕದಲ್ಲಿ ಮೊದಲ ಬಾರಿ ಹಿಂದು ಳಿದ ವರ್ಗ ಘಟಕ ಸ್ಥಾಪನೆಗೊಂಡಿತ್ತು. ನಂತರ ರಾಷ್ಟ್ರಮಟ್ಟದಲ್ಲೂ ಹಿಂದುಳಿದ ವರ್ಗದ ಘಟಕ ಸೇರಿ ಇತರ ಘಟಕಗಳು ಆರಂಭವಾದವು ಎಂದು ಸ್ಮರಿಸಿದರು. ಇದೇ ಸಂಸರ್ಭದಲ್ಲಿ ಮಹಾನಗರ ಪಾಲಿಕೆಯಲ್ಲಿ ಗೆದ್ದ ಹಿಂದುಳಿದ ವರ್ಗಗಳ ಸದಸ್ಯರಿಗೆ ಸನ್ಮಾನಿಸಲಾಯಿತು.

ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಡಾ| ಅವಿನಾಶ್‌ ಜಾಧವ್‌, ವಿಧಾನ ಪರಿತ್‌ ಸದಸ್ಯರಾದ ಸುನೀಲ್‌ ಮಲ್ಯಾಪುರೆ, ಬಿ.ಜಿ.ಪಾಟೀಲ, ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಲಿಂಗರಾಜ ಬಿರಾದಾರ, ಧರ್ಮಣ್ಣ ದೊಡ್ಡಮನಿ, ಮಲ್ಲಿಕಾರ್ಜುನ, ಚನ್ನಮ್ಮ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

5 ಕೋಟಿ ಮನೆಗಳಿಗೆ ನೀರು
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ನಂತರ ಕೇವಲ 3 ಕೋಟಿ ಗ್ರಾಮೀಣ ಜನರ ಮನೆಗೆ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಆದರೆ, ಮೋದಿ ಸರ್ಕಾರ ಅಧಿಕಾರ ನಂತರ ಕಳೆದ ಕೇವಲ ಎರಡೇ ವರ್ಷದಲ್ಲಿ 5 ಕೋಟಿ ಗ್ರಾಮೀಣ ಜನರಿಗೆ ನೀರು ಪೂರೈಸಲಾಗಿದೆ. ಮುಂದಿನ 2024ರೊಳಗೆ ದೇಶದ ಪ್ರತಿ ಹಳ್ಳಿಗಳಲ್ಲಿ ಪ್ರತಿ ಮನೆಗೂ ನೀರು ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಸಿದ್ದರಾಮಯ್ಯ ಒಂದು ಮಾತೂ ಹೇಳಲಿಲ್ಲ

ಹಿಂದುಳಿದ ವರ್ಗಕ್ಕೆ ಸೇರಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ನಾನು ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೆ. ಅವರಿಗೆ ಎಲ್ಲ ರೀತಿಯ ಸಹಕಾರವನ್ನೂ ನಾನು ನೀಡಿದ್ದೆ. ಆದರೆ, ನಮ್ಮವರು, ನಮ್ಮನ್ನೇ ತುಳಿಯುತ್ತಾರೆ ಎಂಬಂತೆ ಕಾಂಗ್ರೆಸ್‌ ಬಿಡಬೇಕಾದರೆ, ಸಿದ್ದರಾಮಯ್ಯ ಒಂದೂ ಮಾತು ಹೇಳಲಿಲ್ಲ. ಸಿದ್ದರಾಮಯ್ಯ ಕೂಡ ಹಿಂದುಳಿದ ವರ್ಗವರನ್ನು ಉಪಯೋಗಿಸಿಕೊಂಡು ಕೈ ಬಿಟ್ಟರು ಎಂದು ಮಾಲೀಕಯ್ಯ ಗುತ್ತೇದಾರ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next