ಬೆಂಗಳೂರು : ರಾಜ್ಯ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದು, ನೀವು ರಾಜಕೀಯ ನಿವೃತ್ತಿ ನೀಡಬೇಡಿ ಎಂದು ಅಣಕವಾಡಿದೆ.
ಜಾರ್ಜ್, ಮಹಾದೇವಪ್ಪ, ಗೋವಿಂದರಾಜು, ಕೆಂಪಯ್ಯ ಇವರೆಲ್ಲ ನಿಮ್ಮ ಅತ್ಯಾಪ್ತರಲ್ಲವೇ ಸಿದ್ದರಾಮಯ್ಯ.ಇವರೆಲ್ಲರ ಮೇಲೆ ಐಟಿ ದಾಳಿ ನಡೆದಿದ್ದನ್ನು ನೆನಪಿಸಿಕೊಳ್ಳಿ. ನೀವು ಭ್ರಷ್ಟಾಚಾರ ನಡೆಸಿಲ್ಲವೆಂದು ಎದೆತಟ್ಟಿ ಹೇಳಿರಬಹುದು.ಆದರೆ ಭ್ರಷ್ಟ ಹಣ ಸಂಗ್ರಹಕ್ಕೆ ಸುತ್ತಲೂ ವ್ಯವಸ್ಥೆ ರೂಪಿಸಿಕೊಂಡಿಲ್ಲವೆಂದು ಹೇಳುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದೆ.
ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ತಮ್ಮ ಸುತ್ತಲೂ ಭ್ರಷ್ಟರ ದಂಡನ್ನೇ ಇಟ್ಟುಕೊಂಡಿದ್ದರು.ಸಿದ್ದರಾಮಯ್ಯ ಅವರ ಆತ್ಮೀಯರೆಲ್ಲರ ಮೇಲೂ ಕಪ್ಪ ಹಣ ಸಂಗ್ರಹಣೆ ಆರೋಪವಿತ್ತು.ಸಿದ್ದರಾಮಯ್ಯನವರೇ, ನಿಮ್ಮ ಸಲಹೆಗಾರರೊಬ್ಬರ ಐಟಿ ದಾಳಿಯಾದಾಗ ರಾತ್ರಿ ಬಂದು ನಿಮ್ಮ ಮುಂದೆ ಕಣ್ಣೀರು ಸುರಿಸಿದ್ದು ನೆನಪಿದೆಯೇ? ಅದಕ್ಕೇನು ಹೇಳುತ್ತೀರಿ? ಎಂದು ಇನ್ನೊಂದು ಟ್ವೀಟ್ ಅಸ್ತ್ರ ಎಸೆದಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ನೀವು ರಾಜಕೀಯ ನಿವೃತ್ತಿ ನೀಡಬೇಡಿ.ದೇಶಾದ್ಯಂತ ಕಾಂಗ್ರೆಸ್ ಹಡಗನ್ನು ಮುಳುಗಿಸಲು ನಿಮ್ಮಂತಹ ನಾಯಕರ ಅಗತ್ಯವಿದೆ. ಅಂದ ಹಾಗೆ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಹ್ಯೂಬ್ಲೋಟ್ ವಾಚ್ ಬಂದಿದ್ದೆಲ್ಲಿಂದ? ಎಂದು ಪ್ರಶ್ನಿಸಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ.ಆದರೆ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ವಾದ್ರಾ ಅವರು ತಮ್ಮನ್ನು ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ.ಅಂದ ಹಾಗೆ ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಇದ್ದ ಕಾರ್ಯಕಾರಿಣಿ ಸಮಿತಿ ಅಸ್ತಿತ್ವದಲ್ಲಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.