ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹಣಿಯಲು ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೈಜೋಡಿಸಿ ಪರಸ್ಪರರಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ.
ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಈ ವಿಷಯವನ್ನು ದೃಢೀಕರಿಸಿದ್ದಾರೆ. ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷ 40 ಲೋಕಸಭಾ ಸೀಟುಗಳಲ್ಲಿ ಜಂಟಿಯಾಗಿ ಸ್ಪರ್ಧಿಸಲಿವೆ; ಉಳಿದ ಎಂಟು ಸೀಟುಗಳ ಬಗೆಗಿನ ನಿರ್ಧಾರವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಸೀಟುಗಳಿವೆ. 80 ಸೀಟು ಹೊಂದಿರುವ ಉತ್ತರ ಪ್ರದೇಶದ ಬಳಿಕ ಗರಿಷ್ಠ ಸಂಖ್ಯೆಯ ಲೋಕಸಭಾ ಸೀಟು ಹೊಂದಿರುವ ದೇಶದ ಎರಡನೇ ರಾಜ್ಯ ಮಹಾರಾಷ್ಟ್ರ ಆಗಿದೆ.
ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಹೋರಾಡಿದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಯಶಸ್ಸು ಗಳಿಸುವುದು ಸುಲಭ ಮತ್ತು ಖಚಿತ ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಹೇಳಿಕೊಂಡಿದೆ.
Related Articles
ಇದೇ ವೇಳೆ ಎನ್‌ಸಿಪಿ ನಾಯಕ ಶರದ್ ಪವಾರ್, ಲೋಕಸಭಾ ಚುನಾವಣೆ ಸಿದ್ಧತೆ ಮತ್ತು ರಣತಂತ್ರ ರೂಪಣೆಗೆಂದು ಪ್ರಮುಖ ವಿರೋಧ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿನ ಲೋಕಸಭಾ ಸೀಟುಗಳನ್ನು ಯಾವ ಅನುಪಾತದಲ್ಲಿ ಹಂಚಿಕೊಳ್ಳಬೇಕೆಂಬುದನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದು ಉಭಯ ಪಕ್ಷಗಳ ಮೂಲಗಳು ತಿಳಿಸಿವೆ.