ಹೊಸದಿಲ್ಲಿ : 30 ವರ್ಷಗಳ ಹಿಂದೆ ತೋರಿಸಿದ ರಸ್ತೆ ಆಕ್ರೋಶದಲ್ಲಿ 65ರ ಹರೆಯದ ಗುರ್ನಾಮ್ ಸಿಂಗ್ ಎಂಬವರ ಸಾವಿಗೆ ಕಾರಣರಾಗಿದ್ದ 55ರ ಹರೆಯದ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ, ನವಜ್ಯೋತ್ ಸಿಂಗ್ ಸಿಧು ಅವರನ್ನು ಸರ್ವೋಚ್ಚ ನ್ಯಾಯಾಲಯ ಜೈಲಿಗೆ ಕಳುಹಿಸಿಲ್ಲ; ಬದಲು ಅವರಿಗೆ ಕೇವಲ 1,000 ರೂ. ದಂಡ ವಿಧಿಸಿದೆ.
ರಸ್ತೆ ಆಕ್ರೋಶದಲ್ಲಿ ಸಿಧು ಅವರು ಗುರ್ನಾಮ್ ಸಿಂಗ್ ಅವರ ಜೀವವನ್ನು ಬಲಿ ಪಡೆದ ಘಟನೆ 1988ರ ಡಿಸೆಂಬರ್ 27ರಂದು ಪಟಿಯಾಲಾದಲ್ಲಿ ನಡೆದಿತ್ತು.
ಸಿಧು ವಿರುದ್ಧದ ಚಾರ್ಜ್ ಶೀಟ್‌ಪ್ರಕಾರ ಅವರಿಗೆ ಒಂದು ವರ್ಷದ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶವಿತ್ತು.
ಆದರೆ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ, “ಇದು 30 ವರ್ಷಗಳಷ್ಟು ಹಳೆಯ ಕೇಸು; ಈ ಪ್ರಕರಣದಲ್ಲಿ ಸಾವಪ್ಪಿದ ವ್ಯಕ್ತಿಗೂ ಆರೋಪಿ ಸಿಧು ಅವರಿಗೂ ಯಾವುದೇ ಪೂರ್ವ ದ್ವೇಷ ಇರಲಿಲ್ಲ. ಆದುದರಿಂದ ಈ ಪ್ರಕರಣದಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾವು ಆರೋಪಿಗೆ 1,000 ರೂ. ದಂಡ ಹೇರುತ್ತಿದ್ದೇವೆ’ ಎಂದು ಹೇಳಿತು.
ಸುಪ್ರೀಂ ಕೋರ್ಟಿನ ಈ ತೀರ್ಪಿನ ಪರಿಣಾಮವಾಗಿ ಸಿಧು ಅವರು ಪಂಜಾಬ್ ಸರಕಾರದಲ್ಲಿ ಸಚಿವರಾಗಿ ಮುಂದುವರಿಯುವುದಕ್ಕೆ ಯಾವುದೇ ಅಡ್ಡಿ ಇಲ್ಲವಾಗಿದೆ.