ನವದೆಹಲಿ: ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದ್ದಿರುವುದಾಗಿ ಪಾಕಿಸ್ತಾನ ಸಚಿವ ಖುದ್ದಾಗಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿರುಗೇಟು ನೀಡಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯ ಹಿಂದೆ ಸಂಚು ಅಡಗಿದೆ ಎಂದು ಕಾಂಗ್ರೆಸ್ ಮುಖಂಡರು ಈ ಹಿಂದೆ ಆರೋಪಿಸಿದ್ದರು. ಆದರೆ ಇದೀಗ ಪಾಕಿಸ್ತಾನವೇ ಪುಲ್ವಾಮಾ ದಾಳಿಯ ಹಿಂದಿರುವ ಬಗ್ಗೆ ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ಇದೊಂದು ಸಂಚು ಎಂದು ಆರೋಪಿಸಿದ್ದ ಕಾಂಗ್ರೆಸ್ ಮತ್ತು ಇತರರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಶುಕ್ರವಾರ (ಅಕ್ಟೋಬರ್ 30, 2020) ಟ್ವೀಟ್ ಮೂಲಕ ಬಿಸಿ ಮುಟ್ಟಿಸಿರುವುದಾಗಿ ವರದಿ ತಿಳಿಸಿದೆ.
ಫೆಬ್ರುವರಿ ತಿಂಗಳಿನಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆಡಳಿತಾರೂಢ ಬಿಜೆಪಿ ಸರ್ಕಾರವೇ ಇದಕ್ಕೆ ಹೊಣೆಯಾಗಿದ್ದು, ಇದೊಂದು ಭದ್ರತಾ ವೈಫಲ್ಯ ಎಂದು ದೂರಿದ್ದರು. ಅಲ್ಲದೇ ಈ ದಾಳಿಯಿಂದ ಲಾಭ ಪಡೆದುಕೊಂಡವರು ಯಾರು? ಈ ಬಗ್ಗೆ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಗುಜರಾತ್: 17 ಎಕರೆ ವಿಸ್ತಾರವುಳ್ಳ “ಆರೋಗ್ಯ ವನ” ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಮಾತ್ರ ವಾಗ್ದಾಳಿ ನಡೆಸಿಲ್ಲ. ಕಳೆದ ಮಾರ್ಚ್ ನಲ್ಲಿ ಕರ್ನಾಟಕದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್, ಈ ಘಟನೆ ಗಮನಿಸಿದರೆ ನರೇಂದ್ರ ಮೋದಿ ಅವರು ಪಾಕಿಸ್ತಾನದ ಜನರ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಂತಿದೆ ಎಂದು ಆರೋಪಿಸಿದ್ದರು.