Advertisement

ಕಾಂಗೆ‹ಸ್‌ ಮುಕ್ತ ಭಾರತ ನಮ್ಮ ಮಾತಲ್ಲ: ಭಾಗವತ್‌

07:29 AM Apr 02, 2018 | Team Udayavani |

ಪುಣೆ/ಹೊಸದಿಲ್ಲಿ: “ಕಾಂಗ್ರೆಸ್‌ ಮುಕ್ತ ಭಾರತ’ ಎನ್ನುವುದು ರಾಜಕೀಯ ಘೋಷ ವಾಕ್ಯ. ಅದು ಆರ್‌ಎಸ್‌ಎಸ್‌ನ ಭಾಷೆಯಲ್ಲ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. “ಮುಕ್ತ’ ಪದ ರಾಜಕೀಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಸಂಘ ಪರಿವಾರದಲ್ಲಿ ಎಲ್ಲರನ್ನೂ ಜತೆಗೂಡಿಸಿಕೊಂಡು ಹೋಗುವ ಬಗ್ಗೆ ಮಾತನಾಡುತ್ತೇವೆ ಎಂದು ಪ್ರತಿಪಾದಿಸಿದ್ದಾರೆ.

Advertisement

ಮಹಾರಾಷ್ಟ್ರದ ಪುಣೆಯಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂಘ ಪರಿವಾರ ಎಲ್ಲರನ್ನೂ ಒಟ್ಟುಗೂಡಿಸುವ ಮಾತನಾಡುತ್ತದೆ. ಮುಕ್ತ ಎಂಬ ಪದಪ್ರಯೋಗ ರಾಜಕೀಯಕ್ಕೆ ಸೀಮಿತ. ನಾವು ಯಾರನ್ನೂ ಹೊರಗಿಡುವಂಥ ಮಾತನ್ನು ಆಡುವುದಿಲ್ಲ. ದೇಶ ಕಟ್ಟುವ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನಮ್ಮನ್ನು ವಿರೋಧಿಸುವವರನ್ನೂ ಕರೆದುಕೊಂಡು ಜತೆಗೂಡಿ ಸಾಗಬೇಕು’ ಎಂದು ಭಾಗವತ್‌ ಹೇಳಿದ್ದಾರೆ. 

ಧನಾತ್ಮಕ ಚಿಂತನೆ: ಯಾವುದೇ ರೀತಿಯ ಬದಲಾವಣೆ ತರಲು ಧನಾತ್ಮಕ ಚಿಂತನೆ ಬೇಕು. ಋಣಾತ್ಮಕ ಚಿಂತನೆ ಮಾಡುವವರಿಂದ ವಿಭಜನೆ ಮತ್ತು ಜಗಳವನ್ನು ಮಾತ್ರ ನಿರೀಕ್ಷಿಸಬಹುದು. ಅವರಿಂದ ದೇಶ ಕಟ್ಟುವಂಥ  ಯಾವುದೇ ಕೊಡುಗೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿ ದ್ದಾರೆ ಆರೆಸ್ಸೆಸ್‌ ಮುಖ್ಯಸ್ಥ. ಹಿಂದುತ್ವದ ಬಗ್ಗೆ ಮಾತ ನಾಡಿದ ಅವರು, ತನ್ನ ಬಗ್ಗೆ ವಿಶ್ವಾಸ ಹೊಂದಿರುವವನು ಕುಟುಂಬ ಮತ್ತು ದೇಶದ ಬಗ್ಗೆಯೂ ಅದೇ ಧೋರಣೆ ಹೊಂದಿ ರುತ್ತಾನೆ. ಅಂಥ ಮನಸ್ಥಿತಿ ಹೊಂದಿರುವ ವ್ಯಕ್ತಿಯಿಂ ದಲೇ ದೇಶ ಕಟ್ಟುವ ಪ್ರಕ್ರಿಯೆ ಶುರುವಾಗುತ್ತದೆ ಎಂದರು.

17ರಿಂದ ಆರ್‌ಎಸ್‌ಎಸ್‌ ಸಭೆ: ಇದೇ ವೇಳೆ, ಲೋಕ ಸಭೆ ಚುನಾವಣೆಗೆ ಸರಿಯಾಗಿ ಒಂದು ವರ್ಷ ಇರು ವಂತೆಯೇ ಆರೆಸ್ಸೆಸ್‌ ಕೂಡ ಪೂರ್ವ ಸಿದ್ಧತೆ ಆರಂಭಿ ಸಿದೆ. 17ರಿಂದ 21ರ ವರೆಗೆ ಪುಣೆಯಲ್ಲಿ ಬಿರುಸಿನ ಸಮಾಲೋಚನೆ ನಡೆಯಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡಗಳಲ್ಲಿ ಹಾಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹಾಗೂ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಉಂಟಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ ಎಂದು ಆರೆಸ್ಸೆಸ್‌ನ ಹಿರಿಯ ನಾಯಕರೊಬ್ಬರನ್ನು ಉಲ್ಲೇಖೀಸಿ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ನೇತೃತ್ವದಲ್ಲಿ ಈ  ಸಮಾಲೋಚನಾ ಸಭೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ, ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆವ ಸಾಧ್ಯತೆ ಇದೆ. 21 ರಾಜ್ಯಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸರಕಾರ ಇದ್ದ ಹೊರತಾಗಿಯೂ ಉಪಚುನಾವಣೆಗಳಲ್ಲಿ ಪಕ್ಷಕ್ಕೆ ಸೋಲು ಉಂಟಾಗಿರುವುದು, ಗುಜರಾತ್‌ನಲ್ಲಿ ಬಿಜೆಪಿಯ ಸಂಖ್ಯಾ ಬಲ ಕುಸಿದಿರುವುದನ್ನೂ ಆರೆಸ್ಸೆಸ್‌ ಗಂಭೀರ ವಾಗಿ ಪರಿಗಣಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶ ಗಳಲ್ಲಿ ನಾಯಕತ್ವ ಬದಲಾಗುವ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ರಾಜಗುರು ಆರೆಸ್ಸೆಸ್‌ ಸ್ವಯಂ ಸೇವಕ
ಸ್ವಾತಂತ್ರ್ಯ ಹೋರಾಟಗಾರ ರಾಜಗುರು ಆರೆಸ್ಸೆಸ್‌ ಸ್ವಯಂಸೇವಕ. ಹೀಗೆಂದು ಹಿರಿಯ ಪತ್ರಕರ್ತ ನರೇಂದ್ರ ಸೆಹೆಗಲ್‌ ಬರೆದಿರುವ “ಭಾರತ್‌ ವರ್ಷ್‌ ಕಿ ಸರ್ವಾಂಗ್‌ ಸ್ವತಂತ್ರತಾ’ ಎಂಬ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.  1928ರಲ್ಲಿ ಬ್ರಿಟಿಷ್‌ ಪೊಲೀಸ್‌ ಅಧಿಕಾರಿ ಜೆ.ಪಿ. ಸ್ಯಾಂಡರ್ಸ್‌ರಿಗೆ ಗುಂಡು ಹಾರಿಸಿದ್ದಕ್ಕೆ ಭಗತ್‌ ಸಿಂಗ್‌, ಸುಖ್‌ದೇವ್‌ ಹಾಗೂ ರಾಜಗುರು ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. “ಆರೆಸ್ಸೆಸ್‌ ಸ್ವಾತಂತ್ರ್ಯ ಹೋರಾಟ ಗಾರರು’ ಎಂಬ ಹೆಸರಿನ ಅಧ್ಯಾಯದಲ್ಲಿ ಈ ಅಂಶದ ಉಲ್ಲೇಖವಿದೆ. ಪುಸ್ತಕದ ಪ್ರತಿಯನ್ನು ಕಳೆದ ತಿಂಗಳು ನಾಗ್ಪುರದಲ್ಲಿ ನಡೆದಿದ್ದ ಅಖೀಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಹಂಚಲಾಗಿತ್ತು. ರಾಜಗುರು ಸಂಘದ ಸಂಸ್ಥಾಪಕ ಕೆ.ಬಿ.ಹೆಡಗೆವಾರ್‌ರನ್ನು ಭೇಟಿಯಾಗಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next