Advertisement

2001ರ ಸಂಸತ್‌ ದಾಳಿ ಮತ್ತೆ ನೆನಪಿಗೆ:ಕಾಂಗ್ರೆಸ್‌ ಸಂಸದನ ಕಾರು ಅವಾಂತರ

11:13 AM Feb 12, 2019 | Team Udayavani |

ಹೊಸದಿಲ್ಲಿ : 2001ರ ಡಿಸೆಂಬರ್‌ 13ರಂದು ಪಾಕಿಸ್ಥಾನದ ಲಷ್ಕರ್‌ ಎ ತಯ್ಯಬ ಮತ್ತು ಜೈಶ್‌ ಎ ಮೊಹಮ್ಮದ್‌ ಉಗ್ರರು ಸಂಸತ್ತಿನ ಮೇಲೆ ಹಠಾತ್‌ ದಾಳಿ ನಡೆಸಿ ಒಂಬತ್ತು ಮಂದಿ ಭದ್ರತಾ ಸಿಬಂದಿಗಳನ್ನು ಕೊಂದಿದ್ದ ಘಟನೆಯನ್ನು ನೆನಪಿಸಿಕೊಳ್ಳುವ ಒಂದು ಆತಂಕದ ಪ್ರಸಂಗ ಇಂದು ಸಂಸತ್‌ ಆವರಣದಲ್ಲಿ ನಡೆಯಿತು. 

Advertisement

ಸಂಸತ್‌ ಆವರಣವನ್ನು ನಿರ್ಗಮನದ ಗೇಟ್‌ ಮೂಲಕ ಕಾರೊಂದು ಒಳ ಪ್ರವೇಶಿಸಿದಾಗ ಭದ್ರತಾ ಪಡೆಗಳು ಒಡನೆಯೇ ಚುರುಕಾದರು. ಈ ಕಾರನ್ನು ಭದ್ರತಾ ಸಿಬಂದಿಗಳು ಕೂಡಲೇ ತಡೆದು ನಿಲ್ಲಿಸಿ ಅದರ ಕೂಲಂಕಷ ತಪಾಸಣೆಯನ್ನು ನಡೆಸಿದರು. 

ತಪಾಸಣೆ ವೇಳೆ ಈ ಕಾರು ಕಾಂಗ್ರೆಸ್‌ ಲೋಕಸಭಾ ಸದಸ್ಯ ಡಾ. ತೋಕೋಚೋಮ್‌ ಮೆನ್ಯಾ ಅವರಿಗೆ ಸೇರಿದ್ದೆಂದು ಗೊತ್ತಾಯಿತು. ಇವರು ಇನ್ನರ್‌ ಮಣಿಪುರ ಕ್ಷೇತ್ರದ ಎಂಪಿ. ಇವರು ಕಾರು ‘Member of Parliament’ ಸ್ಟಿಕರ್‌ ಹೊಂದಿತ್ತು ಮತ್ತು ಅದರ ನಂಬ್ರ ಡಿಎಲ್‌ 12 ಸಿಎಚ್‌ 4897 ಎಂದಿತ್ತು. 

ಬಿಗಿ ಭದ್ರತೆ ಇದ್ದ ಹೊರತಾಗಿಯೂ ಈ ಕಾರು ತಪ್ಪು ಗೇಟ್‌ ಮೂಲಕ ಹೇಗೆ ಒಳಗೆ ಬಂತೆಂಬುದು ಭದ್ರತಾ ಸಿಬಂದಿಗಳಿಗೆ ಯಕ್ಷ ಪ್ರಶ್ನೆಯಾಯಿತು. 

ಸಂಸತ್‌ ಆವರಣವನ್ನು ಸಂಸದರ ಕಾರೊಂದು ಹಿಂಬದಿಯ ತಪ್ಪು ಗೇಟ್‌ ಮೂಲಕ ಪ್ರವೇಶಿಸಿದ ಘಟನೆಯ ಬಗ್ಗೆ ಈಗ ಕೂಲಂಕಷ ತನಿಖೆ ನಡೆಯುತ್ತಿದ್ದು ಭದ್ರತಾ ಲೋಪದ ಪ್ರಶ್ನೆಯನ್ನು ತೀವ್ರವಾಗಿ ವಿಚಾರಿಸಲಾಗುತ್ತಿದೆ. 

Advertisement

2001ರಲ್ಲಿ ಉಗ್ರರಿಂದ ನಡೆದಿದ್ದ ಸಂಸತ್‌ ದಾಳಿಯಲ್ಲಿ ಹತರಾಗಿದ್ದ 9 ಭದ್ರತಾ ಸಿಬಂದಿಗಳ ಪೈಕಿ ಐವರು ದಿಲ್ಲಿ ಪೊಲೀಸರು, ಓರ್ವ ಮಹಿಳಾ ಸಿಆರ್‌ಪಿಎಫ್ ಟ್ರೂಪರ್‌, ಇಬ್ಬರು ಪಾರ್ಲಿಮೆಂಟ್‌ ವಾಚ್‌ ಮ್ಯಾನ್‌ ಗಳು, ಓರ್ವ ವಾರ್ಡ್‌ ಸ್ಟಾಫ್ ಮತ್ತು ಓರ್ವ ಗಾರ್ಡನರ್‌ ಸೇರಿದ್ದರು.

ದಾಳಿ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಪತ್ರಕರ್ತ ಅನಂತರ ಕೊನೆಯುಸಿರೆಳೆದಿದ್ದರು.

ಅಂದು ಸಂಸತ್ತನ್ನು ಪ್ರವೇಶಿಸಿದ್ದ ಐವರು ಉಗ್ರರ ಬಳಿ ಎಕೆ47 ರೈಫ‌ಲ್‌, ಗ್ರೆನೇಡ್‌ ಲಾಂಚರ್‌ಗಳು, ಪಿಸ್ತೂಲುಗಳು, ಗ್ರೆನೇಡ್‌ಗಳು ಇದ್ದವು. ಇವರೆಲ್ಲರನ್ನೂ ಭದ್ರತಾ ಪಡೆಗಳು ಹತ್ಯೆಗೈದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next