Advertisement

ಅಲ್ಪಮತಕ್ಕೆ ಕುಸಿದ ಮಣಿಪುರ ಸರಕಾರ ; ಬಿಜೆಪಿಯ ಮೂವರು ಸೇರಿ 9 ಮಂದಿ ಶಾಸಕರ ಬೆಂಬಲ ವಾಪಸ್‌

02:23 AM Jun 19, 2020 | Team Udayavani |

ಹೊಸದಿಲ್ಲಿ/ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರಕಾರ ಅಲ್ಪಮತಕ್ಕೆ ಕುಸಿದಿದೆ.

Advertisement

ಬುಧವಾರ ರಾತ್ರಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿಯ ಮೂವರು ಶಾಸಕರು, ನ್ಯಾಶನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ನಾಲ್ವರು ಶಾಸಕರು ಡಿಸಿಎಂ ವೈ.ಜಾಯ್‌ ಕುಮಾರ್‌ , ಟಿಎಂಸಿ ಮತ್ತು ಪಕ್ಷೇತರ ಶಾಸಕ ಸರಕಾರಕ್ಕೆ ಬೆಂಬಲ ವಾಪಸ್‌ ಪಡೆದುಕೊಂಡಿದ್ದಾರೆ. 19ರಂದು ರಾಜ್ಯಸಭೆ ಚುನಾ­ವಣೆ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ, 60 ಸದಸ್ಯ ಬಲ ಇರುವ ಮಣಿಪುರ ವಿಧಾನ­ಸಭೆಯಲ್ಲಿ ಬಿಜೆಪಿ ಸರಕಾರ ಈಗ ಅಲ್ಪಮತಕ್ಕೆ ಕುಸಿದಂತೆ ಆಗಿದೆ.

ಶೀಘ್ರ ಮಂಡನೆ: ಅಲ್ಪಮತಕ್ಕೆ ಕುಸಿದಿರುವ ಬಿಜೆಪಿ ಸರಕಾರದ ವಿರುದ್ಧ ಶೀಘ್ರವೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಕಾಂಗ್ರೆಸ್‌ ನಾಯಕ ಒಕ್ರಮ್‌ ಇಬೋಬಿ ಸಿಂಗ್‌ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೂವರು ತಡರಾತ್ರಿಯೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ, ಮಣಿಪುರ ಪ್ರದೇಶ ಕಾಂಗ್ರೆಸ್‌ ಸಮಿತಿ ನಾಯಕರು ರಾಜ್ಯಪಾಲ ನಜ್ಮಾ ಹೆಫ್ತುಲ್ಲಾ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.


ನೋಟಿಸ್‌: ಈ ನಡುವೆ ಸ್ಪೀಕರ್‌ ವೈ. ಖೇಮ್‌ಚಂದ್‌ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್‌ ನೋಟಿಸ್‌ ನೀಡಿದೆ. ಮಣಿಪುರ ವಿಧಾನಸಭೆ ಕಾರ್ಯದರ್ಶಿಗೆ ಕಾಂಗ್ರೆಸ್‌ ಶಾಸಕ ಕೆ. ಮೇಘಚಂದ್ರ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

60 ಸದಸ್ಯತ್ವ ಬಲದ ಮಣಿಪುರ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 28, ಬಿಜೆಪಿ -21 , ಎನ್‌ಪಿಪಿ-4, ಎನ್‌ಪಿಎಫ್-4, ಟಿಎಂಸಿ-1 ಸ್ಥಾನ ಹಾಗೂ ಓರ್ವ ಪಕ್ಷೇತರ ಶಾಸಕ ಗೆಲುವು ಸಾಧಿಸಿದ್ದರು. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್‌ನ ಒಬ್ಬ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಅವರನ್ನು ಅನರ್ಹಗೊಳಿಸಲಾಗಿದೆ. ಜತೆಗೆ ಇನ್ನೂ 7 ಮಂದಿ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದ್ದರು. ಅವರ ವಿರುದ್ಧ ವಿಪಕ್ಷ ಸ್ಪೀಕರ್‌ಗೆ ದೂರು ನೀಡಿತ್ತು. ಜತೆಗೆ ಗುವಾಹಟಿ ಹೈಕೋ­ರ್ಟ್‌ನಲ್ಲೂ ಪ್ರಕರಣ ವಿಚಾರಣೆ ಹಂತದಲ್ಲಿ ಇದೆ.

ಬಿಜೆಪಿ ನೇತೃತ್ವದ ಸರಕಾರದಲ್ಲಿ ನಮಗೆ ಸೂಕ್ತ ಗೌರವ ನೀಡಲಾಗುತ್ತಿರಲಿಲ್ಲ. ಹೀಗಾಗಿ, ಬೆಂಬಲ ವಾಪಸ್‌ ಮಾಡುವ ನಿರ್ಧಾರ ಪ್ರಕಟಿಸಿದ್ದೇವೆ.
– ವೈ.ಜಾಯ್‌ ಕುಮಾರ್‌, ಎನ್‌ಪಿಪಿ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next