ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖವಾಣಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯಲ್ಲಿ ಅಯೋಧ್ಯಾ ತೀರ್ಪಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಬರಹ ಮತ್ತು ಕಾರ್ಟೂನ್ ಒಂದನ್ನು ಪ್ರಕಟಿಸಿದ್ದಕ್ಕಾಗಿ ಆ ಪತ್ರಿಕೆಯ ಸಂಪಾದಕರು ದೇಶವಾಸಿಗಳ ಕ್ಷಮೆ ಕೋರಿದ್ದಾರೆ. ಈ ಆಕ್ಷೇಪಾರ್ಹ ಬರಹಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷಮಾಪಣೆಗೆ ಆಗ್ರಹಿಸಿತ್ತು.
‘ಒಬ್ಬ ನೈಜ ಹಿಂದೂ ಅಯೋಧ್ಯೆಯ ರಾಮಮಂದಿರದಲ್ಲಿ ಎಂದೂ ಪ್ರಾರ್ಥಿಸಲಾರ’ ಎಂಬ ಶೀರ್ಷಿಕೆಯ ಬರಹಕ್ಕೆ ಪತ್ರಿಕೆಯು 1992ರ ಅಯೋಧ್ಯೆ ಮತ್ತು 2019ರ ಸುಪ್ರೀಂ ಕೋರ್ಟ್ ನ ಚಿತ್ರಗಳನ್ನೆರಡನ್ನು ಬಳಸಿಕೊಂಡು ಕೊಲಾಜ್ ರೂಪದ ವ್ಯಂಗ್ಯಚಿತ್ರ ಒಂದನ್ನು ಪ್ರಕಟಿಸಿತ್ತು.
ಮತ್ತು ಈ ವ್ಯಂಗ್ಯಚಿತ್ರಕ್ಕೆ
‘ಹೂಸ್ ಸ್ಟಿಕ್. ಹಿಸ್ ಬಫೆಲೋ’ (ಕೋಲು ಯಾರದ್ದೋ, ಅವನದ್ದೇ ಎಮ್ಮೆ) ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು. ಮತ್ತು
‘ಬಲವಂತವಾಗಿ, ಹಿಂಸೆಯಿಂದ ಮತ್ತು ರಕ್ತಪಾತದಿಂದ ನಿರ್ಮಿಸಲಾಗುವ ಮಂದಿರದಲ್ಲಿ ದೇವರ ಸಾನ್ನಿಧ್ಯ ಇರಲು ಸಾಧ್ಯವೇ? ಮತ್ತು ಒಂದು ವೇಳೆ ಈ ಮಂದಿರದಲ್ಲಿ ದೇವ ಸಾನ್ನಿಧ್ಯ ಬಂದರೂ ನಾವು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವೇ’ ಎಂಬ ಅರ್ಥದ ಕ್ಯಾಪ್ಷನ್ ನೀಡಲಾಗಿತ್ತು.
‘ಒಬ್ಬ ನಿಜವಾದ ಹಿಂದೂ ಅಯೋಧ್ಯೆಯ ರಾಮಮಂದಿರದಲ್ಲಿ ಎಂದೂ ಪ್ರಾರ್ಥಿಸಲಾರ’ ಎಂಬ ಶೀರ್ಷಿಕೆಯ ಲೇಖನವು ಯಾರದ್ದೇ ಭಾವನೆಗಳಿಗೆ ನೋವನ್ನುಂಟುಮಾಡಿದ್ದರೆ ಅದಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ, ಯಾರದ್ದೇ ಭಾವನೆಗಳಿಗೆ ನೋವನ್ನುಂಟು ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ಮತ್ತು ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದೇ ಹೊರತು ಪತ್ರಿಕೆಯದ್ದಲ್ಲ’ ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮುಖ್ಯ ಸಂಪಾದಕರು ತಮ್ಮ ಕ್ಷಮಾಪಣಾ ಬರಹದಲ್ಲಿ ತಿಳಿಸಿದ್ದಾರೆ.
ಈ ಬರಹಕ್ಕೆ ಭಾರತೀಯ ಜನತಾ ಪಕ್ಷವು ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಮತ್ತು ಇದು ಆ ಪಕ್ಷದ ನಿಜವಾದ ನಿಲುವನ್ನು ತೋರ್ಪಡಿಸುತ್ತದೆ ಎಂದು ಬಿಜೆಪಿ ಕಿಡಿ ಕಾರಿತ್ತು. ಮತ್ತು ಸುಪ್ರೀಂ ಕೋರ್ಟಿನ ತೀರ್ಪನ್ನು ಪ್ರಶ್ನಿಸುವ ಮೂಲಕ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ದೇಶವಾಸಿಗಳಿಗೆ ಮುಜುಗರ ಉಂಟುಮಾಡಿದೆ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಅವರು ಆರೋಪಿಸಿದ್ದರು.
ಭಾರತದ ಪ್ರಥಮ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರು 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಸ್ಥಾಪಿಸಿದ್ದರು. ಈ ಪತ್ರಿಕೆ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವಾಸಿಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.