ಬೆಂಗಳೂರು: ನನ್ನ ಪತ್ನಿ, ಮಗಳ ಪ್ರಾಣಕ್ಕೆ ಅಪಾಯ ತರುವ ಸಂಚು ನಡೆದಿತ್ತು. ನವೀದ್ ಎಂಬ ವ್ಯಕ್ತಿ ನನ್ನ ಆಸ್ತಿ ಖರೀದಿ ಮಾಡಿದ್ದ. 300 ಕೋಟಿ ರೂ. ಆಸ್ತಿಯನ್ನು 6 ಲಕ್ಷ ಮುಂಗಡ ಕೊಟ್ಟು ಪಡೆದು ಉಳಿದ ಹಣ ಮೋಸ ಮಾಡಿದ್ದ ಎಂದು ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇಬ್ಬರನ್ನು ಮದುವೆಯಾಗಿದ್ದೇನೆ ನಿಜ. ಆದರೆ ಅನ್ಯಾಯ – ಅಕ್ರಮ ಮಾಡಿಲ್ಲ. ನವೀದ್ ಹಾಗೂ ನನಗೆ ವ್ಯಾಪಾರದಲ್ಲಿ ವೈಮನಸ್ಸಿತ್ತು. ನವೀದ್ ನನ್ನ ಮೊದಲ ಪತ್ನಿಗೆ ಮಾತಿನಲ್ಲಿ ಮರಳು ಮಾಡಿ ಮಗಳ ಸಹಿತ ಅಪಹರಿಸಿದ್ದ. ಸುಮಾರು 9 ತಿಂಗಳು ಬಚ್ಚಿಟ್ಟಿದ್ದ. ನನ್ನ ವಿರುದ್ಧ ನನ್ನ ಹೆಂಡತಿಯ ಕಡೆಯಿಂದಲೇ ಕೇಸು ಹಾಕಿಸಿದ್ದರು. 1000 ಕೋಟಿ ಪರಿಹಾರ ಕೇಳಿದ್ದರು. ಆದರೆ ನಾನೇ ನನ್ನ ಹೆಂಡತಿಗೆ ಬುದ್ಧಿವಾದ ಹೇಳಿ ಪ್ರಕರಣ ವಾಪಸ್ ಪಡೆದಿದ್ದೆವು ಎಂದ ಕಣ್ಣೀರು ಹಾಕಿದರು.
ಬಾಬು ಮೊದಲ ಪತ್ನಿ ರುಕ್ಸಾನಾ ಮಾತನಾಡಿ, “ಯಾರ ಮನೆಯಲ್ಲಿ ಜಗಳವಾಗಲ್ಲ. ನಮ್ಮ ಮನೆಯಲ್ಲೂ ಜಗಳವಾಗಿತ್ತು. ನನ್ನ ಕೈಯಿಂದ ಕೇಸ್ ಹಾಕಿಸಿದ್ದರು. ನಾವಿಬ್ಬರು ಮಾತನಾಡಿ ಕೇಸ್ ವಾಪಸ್ ಪಡೆದಿದ್ದೇವೆ. ನನ್ನ ಗಂಡ ದೇವರ ಸಮಾನ. ನನ್ನ ಗಂಡನಿಗೆ ಸಮಸ್ಯೆಗೆ ಮಾಡಲು ಹೊರಟಿದ್ದರು. ಕುಟುಂಬದ ವಿಚಾರ ರಾಜಕೀಯಕ್ಕೆ ಎಳೆಯುತ್ತಿದ್ದಾರೆ. ನಾವು ನಮ್ಮಮನೆಯಲ್ಲಿ ಸುಖವಾಗಿದ್ದೇವೆ. ಎಲ್ಲಾ ಆಸ್ತಿಯೂ ನನ್ನ ಬಳಿಯೇ ಇದೆ. ನನ್ನ ಮಗಳ ಸಂಸಾರ ಹಾಳು ಮಾಡಬೇಡಿ” ಎಂದು ಮನವಿ ಮಾಡಿದರು.
ಇದನ್ನೂ ಓದಿ:ನಾಪತ್ತೆಯಾಗಿದ್ದ ವ್ಯಕ್ತಿಯ ಶವ ದಟ್ಟ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ
ಬಾಬು ಎರಡನೇ ಪತ್ನಿ ಶಾಜಿಯಾ ಮಾತನಾಡಿ, “ಬಿಲ್ಡರ್ ಜೇಸನ್ ನವೀದ್ ಆಸ್ತಿ ಆಸೆಗೆ ಈ ರೀತಿ ಮಾಡಿದ್ದಾನೆ. ಗಂಡನಿಗೆ ಎಂಎಲ್ ಸಿ ಸೀಟು ಸಿಕ್ಕಿದೆ. ಅವರು ಗೆಲ್ಲುತ್ತಾರೆಂಬ ಕಾರಣಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದರು.
ಕೆಜಿಎಫ್ ಬಾಬು ವಿರುದ್ಧ ಸಚಿವ ಸೋಮಶೇಖರ್ ಆರೋಪಕ್ಕೆ ತಿರುಗೇಟು ನೀಡಿದ ಬಾಬು ಪುತ್ರಿ, “ನಮ್ಮ ತಂದೆಯ ಮೇಲೆ ಆರೋಪ ಮಾಡುತ್ತಿದ್ದಾರೆ. ನಿಜಕ್ಕೂ ನಮ್ಮ ತಂದೆ ತುಂಬಾ ಒಳ್ಳೆಯವರು. ಅವರ ಮೇಲಿರುವ ಆರೋಪ ನಿರಾಧಾರ. ಆಸ್ತಿ ಒಡೆಯುವ ಆಸೆಗಾಗಿ ಈ ಕೆಲಸ ಮಾಡಿದ್ದಾರೆ. ಮಗಳ ಮೇಲಿನ ಅತ್ಯಾಚಾರ ಎಂಬ ಆರೋಪದಿಂದ ನೋವಾಗಿದೆ. ದಯವಿಟ್ಟು ಇಂತಹ ಕೆಲಸ ಮಾಡಬೇಡಿ” ಎಂದರು.