Advertisement

ಹೊಟೇಲ್‌ನಿಂದ ರೆಸಾರ್ಟ್‌ಗೆ ಸ್ಥಳಾಂತರಗೊಂಡ ಕೈ ಶಾಸಕರು

10:58 PM Jul 16, 2019 | Team Udayavani |

ಬೆಂಗಳೂರು: ಗುರುವಾರ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದ್ದರಿಂದ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್‌ ಶಾಸಕರು ಮಂಗಳವಾರ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ.

Advertisement

ನಗರದ ಮಧ್ಯಭಾಗದಲ್ಲಿದ್ದ ತಾಜ್‌ ವಿವಾಂತ್‌ ಹೊಟೇಲ್‌ನಲ್ಲಿ ಯಾವುದೇ ರೀತಿಯ ಮುಕ್ತ ವಾತಾವರಣ ಇಲ್ಲದ್ದರಿಂದ ಕಳೆದ ಐದು ದಿನಗಳಿಂದ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದ ಶಾಸಕರು ಪಕ್ಷದ ನಾಯಕರ ಮುಂದೆ ಅಸಮಾಧಾನ ಹೊರ ಹಾಕಿದ್ದರು.

ಅದೇ ಕಾರಣಕ್ಕೆ ಮಂಗಳವಾರ ಎಲ್ಲ ಶಾಸಕರನ್ನು ತಾಜ್‌ ವಿವಾಂತ್‌ ಹೊಟೇಲ್‌ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪ್ರಕೃತಿ ರೆಸಾರ್ಟ್‌ಗೆ ಸ್ಥಳಾಂತರಗೊಳಿಸಲಾಗಿದೆ. ಮಂಗಳವಾರ ಮಧ್ಯಾಹ್ನ ರೆಸಾರ್ಟ್‌ಗೆ ಸ್ಥಳಾಂತರಗೊಂಡಿರುವ ಶಾಸಕರು ನಿದ್ದೆ ಮಾಡಿ, ಸಂಜೆ ರೆಸಾರ್ಟ್‌ ವ್ಯಾಪ್ತಿಯಲ್ಲಿ ಮುಕ್ತವಾಗಿ ವಾಕಿಂಗ್‌ ಮಾಡಿದ್ದಾರೆ.

ನಾಯಕರ ಸರತಿ ಭೇಟಿ: ಶಾಸಕರ ಯೋಗ ಕ್ಷೇಮ ನೋಡಿಕೊಳ್ಳಲು ಪಕ್ಷದ ರಾಜ್ಯ ನಾಯಕರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಡಾ.ಜಿ.ಪರಮೇಶ್ವರ್‌, ಈಶ್ವರ್‌ ಖಂಡ್ರೆ, ಡಿ.ಕೆ.ಶಿವಕುಮಾರ್‌, ಎಂ.ಬಿ. ಪಾಟೀಲ್‌ ರೆಸಾರ್ಟ್‌ಗೆ ತೆರಳಿ ಶಾಸಕರೊಂದಿಗೆ ಉಭಯ ಕುಶಲೋಪರಿ ಚರ್ಚಿಸಿದ್ದಾರೆ.

ಕೋರ್ಟ್‌ ಮಾಹಿತಿಗೆ ಆದ್ಯತೆ: ರೆಸಾರ್ಟ್‌ನಲ್ಲಿದ್ದ ಶಾಸಕರು ಹಾಗೂ ಅಲ್ಲಿಗೆ ಭೇಟಿ ನೀಡಿದ್ದ ಬಹುತೇಕ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಶಾಸಕರ ರಾಜೀನಾಮೆ ಪ್ರಕರಣದ ವಿಚಾರಣೆಯ ಬಗ್ಗೆ ಸಾಕಷ್ಟು ಆಸಕ್ತಿಯಿಂದ ಮಾಹಿತಿ ಪಡೆದುಕೊಳ್ಳುವ ಕೆಲಸ ಮಾಡಿದ್ದಾರೆ.
ಈ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ದೆಹಲಿಗೆ ತೆರಳಿದ್ದರಿಂದ ಅವರಿಂದ ಕೋರ್ಟ್‌ ಕಲಾಪದ ಪ್ರತಿ ಕ್ಷಣದ ಮಾಹಿತಿಯನ್ನು ನಾಯಕರು ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

Advertisement

ಸಂಗಮೇಶ್‌ ಹೊರಹೋಗುವ ವದಂತಿ: ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್‌ನ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್‌ ರೆಸಾರ್ಟ್‌ನಿಂದ ಹೊರ ಹೋಗಲು ಪ್ರಯತ್ನಿಸಿದ್ದರು ಎಂಬ ವದಂತಿ ಹರಡಿತ್ತು. ಈ ಸುದ್ದಿ ಹರಡಿದ ಕೆಲವೇ ಕ್ಷಣಗಳಲ್ಲಿ ಬಿ.ಕೆ. ಸಂಗಮೇಶ ಸ್ಪಷ್ಟನೆ ನೀಡಿದ್ದು, ನಾನು ರೆಸಾರ್ಟ್‌ನಿಂದ ಹೊರಗೆ ಹೋಗುವ ಪ್ರಯತ್ನ ಮಾಡಿಲ್ಲ. ನಾನು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತೇನೆ. ನನಗೆ ಬಿಜೆಪಿಯಿಂದ ಯಾವುದೇ ಕರೆ ಬಂದಿಲ್ಲ. ಗುರುವಾರ ಬೆಳಿಗ್ಗೆವರೆಗೂ ರೆಸಾರ್ಟ್‌ನಲ್ಲಿಯೇ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಕೆ ಗೆಸ್ಟ್‌ ಹೌಸ್‌ನಲ್ಲಿ ವೇಣುಗೋಪಾಲ್‌: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಒಂದು ವಾರದದಿಂದ ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದು, ಗುರುವಾರ ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ಇರುವುದರಿಂದ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದು, ರಾಜ್ಯ ಕಾಂಗ್ರೆಸ್‌ ನಾಯಕರು ಗಂಟೆಗೊಮ್ಮೆ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಹೋಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next