Advertisement

ಕಾಂಗ್ರೆಸ್‌ ಶಾಸಕರಿಗೆ 30 ಕೋಟಿ ಆಮಿಷ

12:30 AM Dec 31, 2018 | Team Udayavani |

ಬೆಂಗಳೂರು/ಮೈಸೂರು: ಕಾಂಗ್ರೆಸ್‌ ಶಾಸಕರಿಗೆ 25 ರಿಂದ 30 ಕೋಟಿ ರೂ. ಹಣ ನೀಡಿ ಖರೀದಿಸಲು ಬಿಜೆಪಿ ಮುಂದಾಗಿದೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ನೇರವಾಗಿ ಆರೋಪ ಮಾಡಿದ್ದು, ರಾಜ್ಯ ರಾಜಕೀಯ ವಲಯಗಳಲ್ಲಿ ನಾನಾ ರೀತಿಯ ಪ್ರಶ್ನೆ ಹುಟ್ಟು ಹಾಕಿದೆ.

Advertisement

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು 104 ಶಾಸಕ ಸ್ಥಾನಗಳಲ್ಲಿ ಗೆದ್ದು ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಕೆಟ್ಟ ಆಸೆಗಳೇ ಜಾಸ್ತಿ ಇದ್ದು, ಒಳ್ಳೇ ಆಸೆಗಳೇ ಇಲ್ಲ. ಕುದುರೆ ವ್ಯಾಪಾರಕ್ಕೆ 25, 30 ಕೋಟಿ ರೂ. ಆಮಿಷ ಒಡ್ಡಲು ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ಶಾಸಕ ರಮೇಶ್‌ ಜಾರಕಿಹೊಳಿ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ದೆಹಲಿಯಲ್ಲಿದ್ದಾರೆ, ಮುಂಬೈನಲ್ಲಿದ್ದಾರೆ, ಬೆಳಗಾವಿಯಲ್ಲಿದ್ದಾರೆ ಎಂಬ ಅಂತೆ ಕಂತೆಗಳೇ ಹರಿದಾಡುತ್ತಿವೆ ಎಂದರು.

ಬಿಜೆಪಿ ಮತ್ತೆ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿರುವ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮುನ್ಸೂಚನೆ ಸಿಕ್ಕಿದೆ. ಹೀಗಾಗಿಯೇ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತನಾಡಿದ್ದೂ ಅಲ್ಲದೇ, ಟ್ವೀಟ್‌ ಕೂಡ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದರ ಬೆನ್ನಲ್ಲೇ ಸಂಪುಟ ಪುನಾರಚರಣೆ ಸಂದರ್ಭದಲ್ಲಿ ಕೈ ಬಿಟ್ಟಿರುವ ರಮೇಶ ಜಾರಕಿಹೊಳಿ ಯಾರ ಕೈಗೂ ಸಿಗದೆ ನಾಲ್ಕೈದು ದಿನಗಳಿಂದ ಸಮ್ಮಿಶ್ರ ಸರ್ಕಾರವನ್ನು ಆತಂಕಕ್ಕೆ ತಳ್ಳಿದ್ದಾರೆ. ಮತ್ತೂಂದೆಡೆ ರಮೇಶ್‌ ಜಾರಕಿಹೊಳಿ ಮತ್ತೂಬ್ಬ ಸಹೋದರ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಜತೆಗೂಡಿ ದೆಹಲಿಯಲ್ಲಿ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ. 

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮೂಲಕ ಅಮಿತ್‌ ಶಾ ಭೇಟಿ ಮಾಡಿದ್ದಾರೆ. ಅವರ ಜತೆ ಪಕ್ಷೇತರ ಶಾಸಕರಾದ ಆರ್‌.ಶಂಕರ್‌, ನಾಗೇಶ್‌ ಸಹ ಇದ್ದಾರೆ. ಒಂದೆರಡು ದಿನಗಳಲ್ಲಿ  ಆನಂದ್‌ಸಿಂಗ್‌, ನಾಗೇಂದ್ರ ಸೇರಿ ವಾಲ್ಮೀಕಿ ಸಮುದಾಯದ ಶಾಸಕರ ಜತೆ ಅವರು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ರಮೇಶ ಜಾರಕಿಹೊಳಿ ಬಿಜೆಪಿ ಸೇರುವುದು ಖಚಿತ ಎಂದು ಅವರ ಆಪ್ತ ವಲಯ ಹೇಳಿಕೊಂಡಿದೆ.  ಇದೇ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಹ ದೆಹಲಿಯಲ್ಲೇ ಬೀಡು ಬಿಟ್ಟಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ. ಇಷ್ಟಾದರೂ ಬಿಜೆಪಿ ನಾವು ಆಪರೇಷನ್‌ ಕಮಲಕ್ಕೆ ಕೈ ಹಾಕಿಲ್ಲ ಎಂದು ಹೇಳುತ್ತಿದೆ. ಈ ಹಿಂದೆ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರಿಂದಲೇ ತಮ್ಮ ಕಾರ್ಯತಂತ್ರ ವಿಫ‌ಲವಾಯಿತು ಎಂಬ ಕಾರಣಕ್ಕೆ ಯಾರೂ ಯಾವುದನ್ನೂ ಬಾಯಿ ಬಿಡುತ್ತಿಲ್ಲ ಎನ್ನಲಾಗಿದೆ.

ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ 25 ರಿಂದ 30 ಕೋಟಿ ರೂ. ಹಣ ನೀಡಿ ಖರೀದಿಸಲು ಮುಂದಾಗಿದೆ. ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ? ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು  ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ?
– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ 

ರಮೇಶ್‌ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವ ಕೆಟ್ಟ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಬಿಜೆಪಿಯವರು ಸುಮ್ಮನೆ ಕಾಂಗ್ರೆಸ್‌ನವರನ್ನು ಸೆಳೆಯಲು ಗಿಮಿಕ್‌ ಮಾಡುತ್ತಾರೆ. ಅವರು ಕಾಂಗ್ರೆಸ್‌ ಪಕ್ಷದ ಚಿನ್ಹೆಯಲ್ಲಿ ಗೆದ್ದು ಬಂದಿದ್ದಾರೆ. ಅವರು ಎಲ್ಲಿಯೂ ಹೋಗುವುದಿಲ್ಲ. ನಾನು ಅವರ ಜೊತೆಗೆ ಮಾತನಾಡುತ್ತೇನೆ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next