Advertisement

ರೆಸಾರ್ಟ್‌ನಲ್ಲಿ  ಆಪರೇಷನ್‌ ಹೊಯ್‌ ಕೈ: ಶಾಸಕರ ಮಾರಾಮಾರಿ

01:05 AM Jan 21, 2019 | |

ಬೆಂಗಳೂರು/ರಾಮನಗರ: ಆಪರೇಷನ್‌ ಕಮಲ ಕಾರ್ಯಾಚರಣೆ ಖೆಡ್ಡಾಗೆ ಬೀಳದಂತೆ ಈಗಲ್‌ಟನ್‌ ರೆಸಾರ್ಟ್‌ನಲ್ಲಿರಿಸಲಾಗಿದ್ದ ಕಾಂಗ್ರೆಸ್‌ ಶಾಸಕರು ಪರಸ್ಪರ ಹೊಡೆದಾಡಿ ಕೊಂಡಿದ್ದು, ಬಳ್ಳಾರಿ ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್‌ಸಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ಕಾಂಗ್ರೆಸ್‌ ಪಕ್ಷಕ್ಕಷ್ಟೇ ಅಲ್ಲದೆ ಸಮ್ಮಿಶ್ರ ಸರಕಾರಕ್ಕೂ ಮುಜುಗರ ಸೃಷ್ಟಿಸಿದ್ದು, ಘಟನೆಯಿಂದ ಬೆಚ್ಚಿ ಬಿದ್ದಿರುವ ಕಾಂಗ್ರೆಸ್‌ ಹೈಕಮಾಂಡ್‌ ತತ್‌ಕ್ಷಣ ಈ ಕುರಿತು ವರದಿ ನೀಡುವಂತೆ ರಾಜ್ಯ ನಾಯಕರಿಗೆ ಸೂಚಿಸಿದೆ.

Advertisement

ರಾತ್ರಿ ಔತಣಕೂಟದಲ್ಲಿ ತೊಡಗಿದ್ದ ವೇಳೆ ಬಿಜೆಪಿ ಸಂಪರ್ಕದಲ್ಲಿದ್ದ ಬಗ್ಗೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ನಾಯಕ ರಿಗೆ ಮಾಹಿತಿ ನೀಡಿದ ವಿಚಾರ ದಲ್ಲಿ ಶಾಸಕರಾದ ಆನಂದ್‌ಸಿಂಗ್‌, ಕಂಪ್ಲಿ ಗಣೇಶ್‌, ಭೀಮಾನಾಯಕ್‌ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ಹೋಯಿತು. ಈ ಸಂದರ್ಭದಲ್ಲಿ ಕಂಪ್ಲಿ ಗಣೇಶ್‌ ಅವರು ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಅವರ ತಲೆ, ಎದೆ, ಬೆನ್ನು ಮತ್ತು ಹೊಟ್ಟೆಗೆ ಪೆಟ್ಟಾಗಿದೆ. ತತ್‌ಕ್ಷಣ ಆನಂದ್‌ಸಿಂಗ್‌ ಅವರನ್ನು  ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಔತಣಕೂಟದಲ್ಲಿದ್ದ ಶಾಸಕರು ಮದ್ಯ ಸೇವಿಸಿದ್ದರು, ಮತ್ತಿನಲ್ಲಿ ಗಲಾಟೆ ನಡೆಯಿತು ಎಂದು ಹೇಳಲಾಗಿದೆ ಯಾದರೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿ ಆನಂದ್‌ಸಿಂಗ್‌ ಅವ ರಿಗೆ ಚಿಕಿತ್ಸೆ ನಡೆಸಿ ಗಾಯಕ್ಕೆ ಹೊಲಿಗೆ ಹಾಕಲಾಗಿದೆ ಎಂದು ಹೇಳ ಲಾಗಿದ್ದು, ಇದನ್ನು ಕಾಂಗ್ರೆಸ್‌ ನಾಯಕರು ನಿರಾಕರಿಸಿದ್ದಾರೆ.

ಮುಚ್ಚಿ ಹಾಕುವ ಯತ್ನ
ಮಾರಾಮಾರಿ ಪ್ರಕರಣ ನಡೆದೇ ಇಲ್ಲ ಎಂದು ಮೊದಲಿಗೆ ಪ್ರತಿಪಾದಿ ಸಿದ ಕಾಂಗ್ರೆಸ್‌ ಅನಂತರ ಸ್ನೇಹಿತರ ನಡುವಿನ ಸಣ್ಣ ಗಲಾಟೆ ಎಂದಿತ್ತು. ಒಂದು ಹಂತದಲ್ಲಿ ಹಲ್ಲೆಯಾಗಿಲ್ಲ, ಆನಂದ್‌ಸಿಂಗ್‌ ಅವರೇ ಜಾರಿ ಬಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂಬ ಗೊಂದಲದ ಹೇಳಿಕೆ ನೀಡಿ ಪ್ರಕರಣ ಮುಚ್ಚಿಹಾಕುವ ಯತ್ನ ಮಾಡಿತು.

ಸಿಎಂ ರಾಜೀನಾಮೆಗೆ ಕೈ ಶಾಸಕರ ಆಗ್ರಹ?
ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರಿಯಾಗಿ ಮಾನ್ಯತೆ ನೀಡದಿರು ವುದ ರಿಂದಲೇ ಶಾಸಕರು ಅಸಮಾಧಾನ ಗೊಂಡಿದ್ದು, ಅವರನ್ನೇ ಬದಲಾಯಿಸಿ ಎಂದು ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ಆಗ್ರಹಿಸಿ ದ್ದಾರೆ ಎಂದು ಹೇಳಲಾಗಿದೆ. ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಸಂಜೆ ಕಾಂಗ್ರೆಸ್‌ ನಾಯಕರು ಶಾಸಕಾಂಗ ಸಭೆ ಕರೆದು ಮಾತುಕತೆ ನಡೆಸಿದ ವೇಳೆ ಈ ಆಗ್ರಹ ಕೇಳಿಬಂದಿದೆ ಎನ್ನಲಾಗಿದೆ. ಈ ಮಧ್ಯೆ, ರವಿವಾರ ಅಪರಾಹ್ನಕ್ಕೆ ರೆಸಾರ್ಟ್‌ ರಾಜಕೀಯಕ್ಕೆ ಮಂಗಳ ಹಾಡಿ ಸ್ವಕ್ಷೇತ್ರಗಳಿಗೆ ತೆರಳಲು ಸಿದ್ದರಾಗಿದ್ದ ಕಾಂಗ್ರೆಸ್‌ ಶಾಸಕರಿಗೆ ತಮ್ಮ ಪಕ್ಷದ ಶಾಸಕರ ಗಲಾಟೆ ಪ್ರಕರಣ ಮತ್ತೂಂದು ದಿನ ರೆಸಾರ್ಟ್‌ ನಲ್ಲಿಯೇ ವಾಸ್ತವ್ಯ ಹೂಡುವಂತೆ ಮಾಡಿದೆ.

Advertisement

ಈ ಮಧ್ಯೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಕಾಂಗ್ರೆಸ್‌ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತು ಕೇಳಿ ಬಂದಿದೆ. ಇದಕ್ಕೆಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕುಟುಂಬಸ್ಥರ ಭೇಟಿ
ಹಲ್ಲೆ ಪ್ರಕರಣ ನಡೆದ ಬಳಿಕ ಹೊಸಪೇಟೆಯಿಂದ ಆಗಮಿಸಿದ ಆನಂದ್‌ ಸಿಂಗ್‌ ಅವರ ತಂದೆ-ತಾಯಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಲ್ಲದೇ ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆನಂದ್‌ ಸಿಂಗ್‌ ಪತ್ನಿ ಲಕ್ಷ್ಮೀ ಮುಂಬಯಿಗೆ ಮದುವೆಗೆ ತೆರಳಿದ್ದರು. ಘಟನೆ ಸುದ್ದಿ ಕೇಳಿ ವಾಪಸ್‌ ಬಂದಿದ್ದು, ಅವರೂ ಘಟನೆಯನ್ನು ಖಂಡಿಸಿ, ತಮ್ಮ ಪತಿಯ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಪತಿ ಅವರನ್ನು ಸುಮ್ಮನೆ ಬಿಡಬಹುದು. ನಾನು ಮತ್ತು ನನ್ನ ಮಕ್ಕಳು ಯಾವುದೇ ಕಾರಣಕ್ಕೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಸ್ಥಾನವೂ ಬೇಡ ಬಿಟ್ಟು ಬಿಡಿ
ಆಗಿರುವ ಗಲಾಟೆಯಿಂದ ಬೇಸರಗೊಂಡಿರುವ ಶಾಸಕ ಆನಂದ್‌ ಸಿಂಗ್‌ ನನಗೆ ಯಾವುದೇ ಶಾಸಕ ಸ್ಥಾನವೂ ಬೇಡ, ರಾಜಕೀಯವೂ ಬೇಡ, ನನ್ನನ್ನು ಬಿಟ್ಟು ಬಿಡಿ ನಾನು ಏನಾದರೂ ವ್ಯವಹಾರ ಮಾಡಿಕೊಂಡು ಇರುತ್ತೇನೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಎದುರು ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಅಂತರ ಕಾಯ್ದುಕೊಂಡ ಜೆಡಿಎಸ್‌
ಬಳ್ಳಾರಿ ಶಾಸಕರ ನಡುವಿನ ಮಾರಾಮಾರಿ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್‌ ತೀರ್ಮಾನಿಸಿದೆ. ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ಶಾಸಕರ ಮಾರಾಮಾರಿ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಪ್ರಕರಣದ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಸಚಿವರು ಮತ್ತು ಶಾಸಕರಿಗೆ ತಾಕೀತು ಮಾಡಿದ್ದಾರೆ.

ಆಪರೇಷನ್‌ ಕಾರಣಕ್ಕೇ ಜಗಳ!
ಆಪರೇಷನ್‌ ಕುರಿತಾಗಿ ಶಾಸಕರ ನಡುವೆ ಜಗಳ ಸಂಜೆಯೇ ಶುರು ವಾಗಿದೆ ಎಂದು ಹೇಳಲಾಗುತ್ತಿದೆ. ಶನಿವಾರ ಸಂಜೆ ರೆಸಾರ್ಟ್‌ನಲ್ಲಿ ಚಹಾ ಕುಡಿಯುವ ವೇಳೆ ಆನಂದ್‌ ಸಿಂಗ್‌, ಭೀಮಾನಾಯ್ಕ, ಜೆ.ಎನ್‌. ಗಣೇಶ್‌ ಮತ್ತು ಸಚಿವ ಪಿ.ಟಿ. ಪರಮೇಶ್ವರ್‌ ನಾಯ್ಕ ಅವರು ಆಪರೇಷನ್‌ ಕಮಲದ ಬಗ್ಗೆ ಚರ್ಚೆ ನಡೆಸಿದ್ದರು. ಆಗ ಆನಂದ್‌ ಸಿಂಗ್‌ ಮತ್ತು ಕಂಪ್ಲಿ ಗಣೇಶ್‌ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಮೇಶ್ವರ್‌ ನಾಯ್ಕ ಇಬ್ಬರನ್ನೂ ಸಮಾಧಾನ ಮಾಡಿ, ಚರ್ಚೆ ಕೈಬಿಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಆದರೆ ರಾತ್ರಿ ಔತಣಕೂಟದ ವೇಳೆ ಆನಂದ್‌ಸಿಂಗ್‌, ಭೀಮಾನಾಯ್ಕ, ಜೆ.ಎನ್‌. ಗಣೇಶ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಮ್‌ ಒಂದೇ ಕಡೆ ಇದ್ದರು. ಈ ಸಂದರ್ಭದಲ್ಲಿ ಶಾಸಕಾಂಗ ಸಭೆಯಲ್ಲಿ ಭೀಮಾನಾಯ್ಕ ಏಕ ವಚನದಲ್ಲಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕೆಂದು ಆನಂದ್‌ ಸಿಂಗ್‌ ಒತ್ತಾಯ ಮಾಡಿದರು. ಆಗ ಭೀಮಾ ನಾಯ್ಕ ಪರವಾಗಿ ತಾವೇ ಕ್ಷಮೆ ಕೇಳುವುದಾಗಿ ಹೇಳಿದ ಗಣೇಶ್‌, ಆನಂದ್‌ ಸಿಂಗ್‌ ಕಾಲಿಗೆ ಬೀಳುವುದಾಗಿ ಹೇಳಿದರು. ಆದರೂ ಭೀಮಾನಾಯ್ಕ ಕ್ಷಮೆ ಕೇಳಬೇಕು ಎಂದು ಆನಂದ್‌ ಸಿಂಗ್‌ ಹಠ ಹಿಡಿದ ಕಾರಣ ಅವರನ್ನು ಭೀಮಾನಾಯ್ಕ ಇದ್ದ ಕೊಠಡಿಗೆ ಕರೆದುಕೊಂಡು ಹೋದರು ಎನ್ನಲಾಗಿದೆ. ಭೀಮಾನಾಯ್ಕ ಸಹ ಆಗಿರುವ ಘಟನೆಗೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ ಎನ್ನಲಾಗಿದ್ದು, ಮುಂದಿನ ಶಾಸಕಾಂಗ ಸಭೆಯಲ್ಲಿ ಎಲ್ಲರೆದುರು ಕ್ಷಮೆ ಕೇಳಬೇಕೆಂದು ಆನಂದ್‌ ಸಿಂಗ್‌ ಒತ್ತಾಯ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಆಪರೇಷನ್‌ ಕಾರಣಕ್ಕೇ ಜಗಳ!
ಈ ಸಂದರ್ಭದಲ್ಲಿ ಮತ್ತೆ ಆಪರೇಷನ್‌ ಕಮಲದ ವಿಚಾರ ಚರ್ಚೆಯಾಗಿ ಶಾಸಕ ಗಣೇಶ್‌ ಅವರು ಆನಂದ್‌ ಸಿಂಗ್‌ ವಿರುದ್ಧ ತಿರುಗಿ ಬಿದ್ದರು. ಸಿಂಗ್‌ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದರು ಎನ್ನಲಾಗಿದೆ.

ಇಬ್ಬರ ನಡುವೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಶಾಸಕ ಭೀಮಾನಾಯ್ಕ ಇತರ ಶಾಸಕರನ್ನು ಕೂಗಿ ಕರೆದು ಜಗಳ ಬಿಡಿಸಿದ್ದಾರೆ ಎಂದು ತಿಳಿದು ಬಂದಿದೆ. ಗಲಾಟೆ ಯಲ್ಲಿ ಜೋರಾಗಿ ಹೊಡೆತ ಬಿದ್ದ ಕಾರಣ ಆನಂದ್‌ ಸಿಂಗ್‌ ಕುಸಿದು ಬಿದ್ದರು. ಕೂಡಲೇ, ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ತುರ್ತು ಚಿಕಿತ್ಸೆ ನಡೆಸಿದ ಅನಂತರ ಬೆಳಗ್ಗೆ 7 ಗಂಟೆಗೆ ಅಧಿಕೃತವಾಗಿ ದಾಖಲಿಕೊಂಡು, ಸಿಂಗ್‌ ಅವರ ಎದೆ, ಬೆನ್ನು ಮತ್ತು ಹೊಟ್ಟೆಯ ಸ್ಕ್ಯಾನ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಣ್ಣಿಗೂ ಗಾಯವಾಗಿದ್ದು, ಈ ಹಿಂದೆ ಕತ್ತು ನೋವಿನಿಂದ ನರಳುತ್ತಿದ್ದರಿಂದ ಕುತ್ತಿಗೆ ಮತ್ತು ಮೆದುಳಿನ ಸ್ಕ್ಯಾನ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೆಡಿಕೋ ಲೀಗಲ್‌ ಕೇಸ್‌
ಶಾಸಕ ಆನಂದ ಸಿಂಗ್‌ ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಎಂಎಲ್‌ಸಿ (ಮೆಡಿಕೋ ಲೀಗಲ್‌ ಕೇಸ್‌) ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಸಿಂಗ್‌ ಸಂಬಂಧಿಕರು ಅಥವಾ ಬೇರೆ ಯಾರಾದರೂ ಹಲ್ಲೆಗೆ ಸಂಬಂಧಿಸಿದಂತೆ ವಿವರ ನೀಡಿದರೆ ಮಾತ್ರ ಆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಕಾಂಗ್ರೆಸ್‌ಗೆ ಮುಜುಗರ
ಶಾಸಕರ ಗಲಾಟೆ ಕಾಂಗ್ರೆಸ್‌ಗೆ ಮುಜುಗರ ತಂದಿದೆ. ರೆಸಾರ್ಟ್‌ ರಾಜಕೀಯ ವಿರೋಧಿಸುತ್ತಿದ್ದ ಆಡಳಿತ ಪಕ್ಷದ ಶಾಸಕರು ಗಲಾಟೆ ಮಾಡಿಕೊಂಡಿರುವುದು ಸಾರ್ವಜನಿಕವಾಗಿ ಮತ್ತಷ್ಟು ಪೇಚಿಗೆ ಸಿಲುಕುವಂತೆ ಮಾಡಿದೆ. ತಪ್ಪನ್ನು ಮುಚ್ಚಿ ಹಾಕಲು ಕೈ ನಾಯಕರು ಇಡೀ ದಿನ ಸರ್ಕಸ್‌ ನಡೆಸಿದರು. ಗಲಾಟೆಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಡಿಕೆಶಿ, ಗಲಾಟೆಯಾಗಿಲ್ಲ, ಆನಂದ್‌ ಸಿಂಗ್‌ ಮದುವೆಗೆ ಹೋಗಿದ್ದಾರೆ ಎಂದು ಮುಚ್ಚಿಡುವ ಪ್ರಯತ್ನ ನಡೆಸಿದರು. ಆಸ್ಪತ್ರೆಯಲ್ಲಿ ಸಂಸದ ಡಿ.ಕೆ. ಸುರೇಶ್‌ ಕೂಡ ಯಾವುದೇ ರೀತಿಯ ಗಲಾಟೆಯಾಗಿಲ್ಲ ಎಂದು ಹೇಳಿದರು.

ವೇಣುಗೋಪಾಲ್‌ ಆಗಮನ
ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ಕೊಪ್ಪಳಕ್ಕೆ ತೆರಳಿದ್ದ ಸಿದ್ದರಾಮಯ್ಯ ಕೂಡ ರೆಸಾರ್ಟ್‌ಗೆ ಆಗಮಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗಂಡೂರಾವ್‌, ಉಪ ಮುಖ್ಯಮಂತ್ರಿ ಪರಮೇಶ್ವರ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಸಂಜೆ ರೆಸಾರ್ಟ್‌ನಲ್ಲಿ ಸಭೆ ನಡೆಸಿ, ಆಗಿರುವ ಬೆಳವಣಿಗೆಯಿಂದ ಪಕ್ಷಕ್ಕೆ ಆಗಿರುವ ಮುಜುಗರ ತಪ್ಪಿಸುವ ಕುರಿತು ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ರಾಜ್ಯಪಾಲರ ಮಧ್ಯಪ್ರವೇಶ?
ಹೊಡೆದಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡಲೇ ರಾಜ್ಯಪಾಲರು ವರದಿ ಪಡೆಯಬೇಕು ಎಂದು ಒತ್ತಾಯಿಸಿರುವ ಬಿಜೆಪಿಯು ಪರಿಸ್ಥಿತಿ ಅವಲೋಕಿಸಿ ಸೂಕ್ತ ಸಂದರ್ಭದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಚಿಂತನೆ ನಡೆಸಿದೆ. ಶಾಸಕ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್‌ ಶಾಸಕರ ವರ್ತನೆಯನ್ನು ಖಂಡಿಸಿದ್ದು, ತೀವ್ರ ವಾಗ್ಧಾಳಿ ನಡೆಸಿದರು. ಬಿಜೆಪಿ ಶಾಸಕ ರಾಜುಗೌಡ ಸಹಿತ ಕೆಲವರು ಆನಂದ್‌ ಸಿಂಗ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿದರೂ ಭೇಟಿಗೆ ಅವಕಾಶ ಸಿಗಲಿಲ್ಲ. ಇದು ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.

ಪ್ರಕರಣ ದಾಖಲಾಗಿಲ್ಲ
ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಇಬ್ಬರು ಶಾಸಕರು ಗಲಾಟೆ ಮಾಡಿಕೊಂಡು ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರೂ, ಪೊಲೀಸರು ಯಾವುದೇ ರೀತಿಯ ಪ್ರಕರಣ ದಾಖಲಿಸಿಕೊಂಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ರಾಜಕೀಯ ಒತ್ತಡದಿಂದ ಯಾರೂ ದೂರು
ನೀಡದ ಕಾರಣ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಭಾನುವಾರ ಬೆಳಗ್ಗೆಯೇ ಘಟನೆ ನಡೆದಿದ್ದರೂ, ಇಡೀ ಪ್ರಕರಣವನ್ನು ಏನೂ ನಡೆದಿಲ್ಲ ಎನ್ನುವಂತೆ ಕಾಂಗ್ರೆಸ್‌ ನಾಯಕರು ಬಿಂಬಿಸಲು ಪ್ರಯತ್ನಿಸಿದ್ದು, ಈ ಬಗ್ಗೆ ಯಾರ ವಿರುದ್ಧವೂ ಯಾರೂ ದೂರು ಕೊಡದಂತೆ ನೋಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಶಾಸಕ ಆನಂದ್‌ ಸಿಂಗ್‌ ಕುಟುಂಬಸ್ಥರೂ ಹಲ್ಲೆ ಪ್ರಕರಣ ಕುರಿತಂತೆ ತಪ್ಪಿತಸ್ಥರ ವಿರುದಟಛಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ, ಅವರೂ ಕೂಡ ಅಧಿಕೃತವಾಗಿ ಯಾವುದೇ ರೀತಿಯ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣದಿಂದ ದೂರ ಉಳಿದಿದ್ದಾರೆ.

ಮಾಹಿತಿ ನೀಡದ ಆಸ್ಪತ್ರೆ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದಲೇ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಹಾಗೂ ಕಾಂಗ್ರೆಸ್‌ ನಾಯಕರನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗಡೆ ಬಿಡದಂತೆ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಆನಂದ್‌ ಸಿಂಗ್‌ ಅವರಿಗೆ ಏನಾಗಿದೆ. ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಬಗ್ಗೆಯೂ ಆಸ್ಪತ್ರೆ ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಗೌಪ್ಯತೆ ಕಾಪಾಡಿಕೊಂಡಿರುವುದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.

 ಕಾಂಗ್ರೆಸ್‌ ಶಾಸಕರು ಪರಸ್ಪರ ಹೊಡೆದುಕೊಂಡಿದ್ದಾರೆ. ಇದು ಶಾಸಕರೆಲ್ಲ ತಲೆ ತಗ್ಗಿಸುವಂತಹ ಕೆಲಸ. ಶಾಸಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಇದಕ್ಕೆ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕು.
– ಬಿ.ಎಸ್‌. ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ

 ನಾನು ಬೇರೆ ಪಕ್ಷದವನಾಗಿದ್ದರೂ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ಆದರೆ ಆಸ್ಪತ್ರೆಯವರು ಯಾರಿಗೂ ಭೇಟಿಗೆ ಅವಕಾಶ ನೀಡುತ್ತಿಲ್ಲ. ಗೌಪ್ಯವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
– ರಾಜು ಗೌಡ, ಸುರಪುರ ಶಾಸಕ

ಗೊಂದಲದ ಹೇಳಿಕೆಗಳು

ಗಲಾಟೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಗೃಹ ಸಚಿವನಾಗಿದ್ದಾಗ ಎಲ್ಲ ಮಾಹಿತಿ ಬರುತ್ತಿತ್ತು. ಈಗ ಮಾಹಿತಿ ಪಡೆದುಕೊಂಡು ಹೇಳುತ್ತೇನೆ.
– ಡಾ| ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ

ಇಬ್ಬರು ಶಾಸಕರ ನಡುವೆ ಯಾವುದೇ ಗಲಾಟೆಯಾಗಿಲ್ಲ. ಆನಂದ್‌ ಸಿಂಗ್‌ ಸಂಬಂಧಿಕರ ಮದುವೆಗೆ ಹೋಗಿ ದ್ದಾರೆ. ಅಪರಾಹ್ನ  ವಾಪಸ್‌ ಬಂದ ತತ್‌ಕ್ಷಣ ಗಣೇಶ್‌ ಮತ್ತು ಆನಂದ್‌ ಸಿಂಗ್‌ ಇಬ್ಬರೂ ಸೇರಿಯೇ ಮಾಧ್ಯಮದ ಎದುರು ಹಾಜರಾಗುತ್ತಾರೆ.
– ಡಿ.ಕೆ. ಶಿವಕುಮಾರ್‌ ಜಲ ಸಂಪನ್ಮೂಲ ಸಚಿವ

ಆನಂದ್‌ ಸಿಂಗ್‌ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ರವಿವಾರ ಸಂಜೆಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
– ಈಶ್ವರ್‌ ಖಂಡ್ರೆ,ಕೆಪಿಸಿಸಿ ಕಾರ್ಯಾಧ್ಯಕ್ಷ

ಆನಂದ್‌ ಸಿಂಗ್‌ ಮತ್ತು ಗಣೇಶ್‌ ನಡುವೆ ಯಾವುದೇ ಗಲಾಟೆಯಾಗಿಲ್ಲ. ಅವರು ಜಾರಿ ಬಿದ್ದು ಗಾಯಗಳಾಗಿವೆ.
– ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ

ಇಬ್ಬರೂ ಸ್ನೇಹಿತರು, ಸಣ್ಣ ಪುಟ್ಟ ಗಲಾಟೆಯಾಗಿದೆ. ದೊಡ್ಡ ವಿಷಯ ವಲ್ಲ. ಆನಂದ್‌ ಸಿಂಗ್‌ ಅವರಿಗೆ ಯಾವುದೇ ಸ್ಟಿಚ್‌ ಹಾಕಿಲ್ಲ. ಅಪರಾಹ್ನ ಬಿರಿಯಾನಿ ತರಿಸಿ ಊಟ ಮಾಡಿದ್ದಾರೆ.
-ಜಮೀರ್‌ ಅಹಮದ್‌
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

ಆನಂದ್‌ ಸಿಂಗ್‌ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ನಿದ್ದೆ ಇಲ್ಲದ ಕಾರಣ ನಿದ್ದೆ ಮಾಡುತ್ತಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ.
– ಡಿ.ಕೆ. ಸುರೇಶ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next