ಬೆಂಗಳೂರು: ರಾಜ್ಯದ ವಿಧಾನ ಮಂಡಲ ಅಧಿವೇಶನ ಇಂದು ಮತ್ತೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಸಿಎಂ ಬಿಎಸ್ ವೈ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಸದನದಲ್ಲಿ ಅಂಗಿ ಬಿಚ್ಚಿದ್ದು, ಇದನ್ನು ಕಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.
ವಿಧಾನಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತಾಗಿ ಚರ್ಚೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್, ಸಿಎಂ ಬಿಎಸ್ ವೈ ವಿರುದ್ದ ವೈಯಕ್ತಿಕ ವಿಚಾರಗಳ ಬಗ್ಗೆ ಆರೋಪ ಮಾಡಿದರು. ಪ್ರತಿಭಟನೆ ಮಾಡುವ ಭರದಲ್ಲಿ ಸಂಗಮೇಶ್ ಅಂಗಿ ತೆಗೆದರು.
ಇದನ್ನೂ ಓದಿ:ನನ್ನ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ:ಸಿಎಂ ಕುಟುಂಬದ ವಿರುದ್ಧ ಶಾಸಕ ಸಂಗಮೇಶ್ ಆರೋಪ
ಇದನ್ನು ಕಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕ ಸಂಗಮೇಶ್ ವಿರುದ್ಧ ಕಿಡಿಕಾರಿದರು. 50 ವರ್ಷ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷದ ಸದಸ್ಯರು ನಡೆದುಕೊಳ್ಳುವ ರೀತಿ ಇದೇನಾ? ನಿಮ್ಮ ಅಭಿಪ್ರಾಯಗಳು ಏನೇ ಇರಲಿ ಮೊದಲು ನಿಮ್ಮ ನಿಮ್ಮ ಸ್ಥಾನಗಳಿಗೆ ಮರಳಿ. ಈ ರೀತಿ ನಡೆದುಕೊಂಡರೆ ಸದನದಿಂದ ಹೊರ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯಪ್ರವೇಶಿಸಿ ಸಂಗಮೇಶ್ ಗೆ ಶರ್ಟ್ ತೊಡಿಸಿದರು. ಸ್ಪೀಕರ್ ಕಾಗೇರಿ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.