ಔರಂಗಾಬಾದ್ : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತನಗೆ ಟಿಕೆಟ್ ನಿರಾಕರಿಸಲಾದ ಕಾರಣಕ್ಕೆ ಮನನೊಂದ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತಾರ್ ಅವರು ಕೇಂದ್ರ ಮಹಾರಾಷ್ಟ್ರದಲ್ಲಿನ ಪಕ್ಷದ ಸ್ಥಳೀಯ ಕಾರ್ಯಾಲಯದಿಂದ ತನ್ನ ಬೆಂಬಲಿಗರ ನೆರವಿನಲ್ಲಿ 300 ಕುರ್ಚಿಗಳನ್ನು ಒಯ್ದ ಘಟನೆ ವರದಿಯಾಗಿದೆ.
ಸಿಲ್ಲೋದ್ ಕ್ಷೇತ್ರದ ಶಾಸಕರಾಗಿರುವ ಸತ್ತಾರ್, “ನಾನು ಪಕ್ಷವನ್ನು ತೊರೆದಿದ್ದು ನನಗೆ ಸೇರಿದ ಕುರ್ಚಿಗಳನ್ನು ನಾನು ಒಯ್ದಿದ್ದೇನೆ” ಎಂದು ಹೇಳಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಘಟಕ ತನ್ನ ಮಿತ್ರ ಪಕ್ಷ ಎನ್‌ಸಿಪಿ ಜತೆಗೆ ಗಾಂಧಿ ಭವನದಲ್ಲಿನ ತನ್ನ ಕಚೇರಿಯಲ್ಲಿ ಜಂಟಿ ಸಭೆಯನ್ನು ಕರೆದಿತ್ತು. ಈ ಸಭೆಗೆ ಮುನ್ನವೇ ಸತ್ತಾರ್ ಅವರು ತನ್ನ ಬೆಂಬಲಿಗರ ನೆರವಿನೊಂದಿಗೆ ಕಾರ್ಯಾಲಯದಲ್ಲಿನ ಸುಮಾರು 300 ಕುರ್ಚಿಗಳನ್ನು ಒಯ್ದರು.
ಸತ್ತಾರ್ ಅವರು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದು ಔರಂಗಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತನಗೆ ಟಿಕೆಟ್ ಸಿಗುವುದೆಂಬ ಆಶಾ ಭಾವನೆ ಹೊಂದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಎಂಎಲ್‌ಸಿ ಸುಭಾಷ್ ಝಾಮ್‌ಬಾದ್ ಅವರನ್ನು ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿತು. ಇದರಿಂದ ಸತ್ತಾರ್‌ಗೆ ತೀವ್ರ ನಿರಾಶೆ, ಹತಾಶೆ ಉಂಟಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಸತ್ತಾರ್, “ಹೌದು, ಆ ಕುರ್ಚಿಗಳು ನನ್ನವು; ನಾನು ಅವುಗಳನ್ನು ಕಾಂಗ್ರೆಸ್ ಸಭೆಗೆಂದು ಕೊಟ್ಟಿದ್ದೆ. ಈಗ ನಾನು ಪಕ್ಷವನ್ನು ತೊರೆದಿದ್ದೇನೆ; ಹಾಗಾಗಿ ನನ್ನ ಕುರ್ಚಿಗಳನ್ನು ನಾನು ಒಯ್ದಿದ್ದೇನೆ. ಯಾರಿಗೆ ಉಮೇದ್ವಾರಿಕೆ ಸಿಕ್ಕಿದೆಯೋ ಅವರೇ ಪ್ರಚಾರಾಭಿಯಾನದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು” ಎಂದು ಹೇಳಿದರು.
ಈ ಘಟನೆಯ ಮಹತ್ವವನ್ನು ಕಡಿಮೆ ಮಾಡುವ ಯತ್ನದಲ್ಲಿ ಅಭ್ಯರ್ಥಿ ಝಾಮ್‌ಬಾದ್ ಅವರು, “ಸತ್ತಾರ್ ಗೆ ಬಹುಷಃ ಕುರ್ಚಿಗಳು ಬೇಕಾಗಿದ್ದವು; ಅದಕ್ಕೋಸ್ಕರ ಅವರು ಅವುಗಳನ್ನು ಒಯ್ದಿರಬಹುದು; ಅದರಿಂದ ನಮಗೇನೂ ನಿರಾಶೆಯಾಗಿಲ್ಲ; ಸತ್ತಾರ್ ಅವರು ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ; ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿಲ್ಲ” ಎಂದು ಹೇಳಿದ್ದಾರೆ.