ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಶುಕ್ರವಾರ ದಿಲ್ಲಿಯಿಂದ ಮೂವರು ಕಾಂಗ್ರೆಸ್ ವೀಕ್ಷಕರು ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜ್ಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಅಂದು ಸಂಜೆ 4ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ವೀಕ್ಷಕರ ನೇತೃತ್ವದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣೆ ಸಿದ್ಧತೆಗಳವರೆಗೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲ ಉಸ್ತುವಾರಿ ಸಚಿವರು ಭಾಗವಹಿಸುವ ಸಾಧ್ಯತೆ ಇದೆ.
ಈಗಾಗಲೇ ಉಸ್ತುವಾರಿಗಳು ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ವರದಿ ನೀಡಿದ್ದು, ಅದರಲ್ಲಿ ಮೂರು ಮತ್ತು ಕೆಲವೆಡೆ ಅದಕ್ಕಿಂತ ಹೆಚ್ಚು ಆಕಾಂಕ್ಷಿಗಳ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಅದರ ಬಗ್ಗೆ ಮತ್ತೂಂದು ಸುತ್ತಿನ ಚರ್ಚೆ ಹಾಗೂ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಜತೆಗೆ ಕಳೆದ 7-8 ತಿಂಗಳಲ್ಲಿ ಉಸ್ತುವಾರಿಗಳು ಆಯಾ ಕ್ಷೇತ್ರಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸ್ಥಳೀಯ ಕಾರ್ಯಕರ್ತರೊಂದಿಗಿನ ಒಡನಾಟ ಮತ್ತಿತರ ಅಂಶಗಳ ಬಗ್ಗೆಯೂ ಅಭಿಪ್ರಾಯ ಪಡೆಯಲಾಗುತ್ತಿದೆ ಎನ್ನಲಾಗಿದೆ.
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು, ಅವರ ಸೋಲು ಅಥವಾ ಗೆಲುವಿನ ಅಂತರ, ಜಾತಿ ಸಮೀಕರಣ, ಈಗಲೂ ಆ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆಯೇ? ಮತ್ತೆ ಕಣಕ್ಕಿಳಿಯಲು ಆಸಕ್ತಿ ಹೊಂದಿದ್ದಾರೆಯೇ ಎಂಬುದರ ಬಗ್ಗೆಯೂ ವೀಕ್ಷಕರು ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿದ ವಾರದ ಅಂತರದಲ್ಲಿ ವೀಕ್ಷಕರು ರಾಜ್ಯಕ್ಕೆ ಆಗಮಿಸಿ, ಸಭೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಹಲವು ನಾಯಕರು ಪ್ರತ್ಯೇಕವಾಗಿ ವೀಕ್ಷಕರನ್ನು ಭೇಟಿ ಮಾಡಿ, ಹಲವು ಸಲಹೆಗಳನ್ನು ನೀಡಲಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿ, ಹೈಕಮಾಂಡ್‌ಗೆ ವರದಿ ಒಪ್ಪಿಸಲಿದ್ದಾರೆ. ಅದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದೂ ಹೇಳಲಾಗುತ್ತಿದೆ.