Advertisement

29ರಂದು ಕೈ ಶಾಸಕಾಂಗ ಪಕ್ಷದ ಸಭೆ

07:22 AM May 26, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಮೇ 29ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪರಾಮರ್ಶಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಸಿಎಲ್‌ಪಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಎಲ್ಲ ಶಾಸಕರಿಗೆ ಪತ್ರ ರವಾನಿಸಿದ್ದಾರೆ.

Advertisement

ನಗರದ ಅಶೋಕ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಅವರು ಉಪಸ್ಥಿತಲಿರಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಶನಿವಾರ ಸಿಡಬ್ಲೂಸಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ, ಅಲ್ಲಿಂದಲೇ ಶಾಸಕಾಂಗ ಪಕ್ಷದ ಸಭೆ ನಿಗದಿಪಡಿಸಿದ್ದಾರೆ. ಹೈಕಮಾಂಡ್‌ ಸೂಚನೆ ಮೇರೆಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಹೇಳಲಾಗಿದೆ.

ದೆಹಲಿ ಭೇಟಿ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿ, ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ನಿರೀಕ್ಷಿತ ಸ್ಥಾನ ಬಂದಿಲ್ಲ.

ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವುಂಟಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ, ಲೋಕಸಭೆ ಚುನಾವಣೆ ಫ‌ಲಿತಾಂಶದ ಆಧಾರದಲ್ಲಿ ಮೈತ್ರಿ ಸರ್ಕಾರದ ಸಂಬಂಧ ಕಡಿದುಕೊಳ್ಳುವುದು ಬೇಡ. ಸರ್ಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಹೈಕಮಾಂಡ್‌ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ರಾಹುಲ್‌, ಸಿದ್ದರಾಮಯ್ಯಗೆ ತಿಳಿಸಿದರು ಎನ್ನಲಾಗಿದೆ.

Advertisement

ಈ ಮಧ್ಯೆ, ಸಿದ್ದರಾಮಯ್ಯ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಬಗ್ಗೆಯೂ ಕಾಂಗ್ರೆಸ್‌ ಹೈಕಮಾಂಡ್‌ನ‌ಲ್ಲಿ ಚರ್ಚೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸಿದ್ದರಾಮಯ್ಯನವರ ಆಪ್ತ ಮೂಲಗಳು ಇದನ್ನು ನಿರಾಕರಿಸಿವೆ.

ಶಂಕರ್‌ ಭೇಟಿ ಕುತೂಹಲ: ಸಿಡಬ್ಲೂಸಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷೇತರ ಶಾಸಕ ಆರ್‌.ಶಂಕರ್‌ ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

“ಆಪರೇಷನ್‌ ಕಮಲ’ ಕಾರ್ಯಾಚರಣೆ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಶಂಕರ್‌, ಇದೀಗ ದಿಢೀರ್‌ ಸಿದ್ದರಾಮಯ್ಯ ಅವರ ಜತೆಯೇ ವಿಮಾನದಲ್ಲಿ ದೆಹಲಿಗೆ ತೆರಳಿ ಕರ್ನಾಟಕ ಭವನದಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಕೆ.ಆರ್‌.ಪುರಂ ಶಾಸಕ ಬೈರತಿ ಬಸವರಾಜ್‌ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಆದರೆ, ಭೇಟಿಗೆ ಏನೂ ವಿಶೇಷ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ನಾನು ಪಕ್ಷೇತರ ಶಾಸಕ, ಮೈತ್ರಿ ಸರ್ಕಾರಕ್ಕೆ ಮತ್ತೆ ಬೆಂಬಲ ನೀಡುವ ವಿಚಾರ ಇಲ್ಲ. ಸಿದ್ದರಾಮಯ್ಯ ಅವರ ಜತೆಯೂ ಆ ವಿಚಾರ ಚರ್ಚಿಸಿಲ್ಲ. ನಾನು ಪಕ್ಷೇತರನಾಗಿಯೇ ಇರುತ್ತೇನೆ ಎಂದು ಶಂಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next