Advertisement

ದಿಲ್ಲಿಯಲ್ಲಿ ಇಂದು ಕಾಂಗ್ರೆಸ್‌ ಸಭೆ; 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮ ಆಗುವುದೇ?

11:10 PM Apr 03, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಾಕಿ ಉಳಿಸಿಕೊಂಡಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ಕಾಂಗ್ರೆಸ್‌ನ ಕೇಂದ್ರ ಚುನಾವಣ ಸಮಿತಿಯ ಸಭೆಯು ದಿಲ್ಲಿಯಲ್ಲಿ ಮಂಗಳವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದೆ.

Advertisement

ಸಭೆ ಹಿನ್ನೆಲೆಯಲ್ಲಿ ಸೋಮ ವಾರವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌ ಅವರು ದಿಲ್ಲಿ ತಲುಪಿದ್ದು ಟಿಕೆಟ್‌ ಆಕಾಂಕ್ಷಿಗಳ ದಂಡೇ ದಿಲ್ಲಿಗೆ ದೌಡಾಯಿಸಿದೆ. ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ ಈಗ ಬಾಕಿ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದಕ್ಕೆ ಮುಂದಾಗಿದೆ.

ಈ ಸಂಬಂಧ ಈಗಾಗಲೇ ಸ್ಕ್ರೀನಿಂಗ್‌ ಕಮಿಟಿಯು ಹಲವು ಸುತ್ತಿನ ಸಭೆ ಸೇರಿ ಟಿಕೆಟ್‌ ಆಕಾಂಕ್ಷಿಗಳ ಜತೆ ಸಭೆಯನ್ನೂ ನಡೆಸಿ ಬಹುತೇಕ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಆದರೆ ಹಲವು ಕಡೆ ಒಂದಕ್ಕಿಂತ ಹೆಚ್ಚು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿರುವುದು ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಹುತೇಕ ಮಂಗಳವಾರದ ಸಭೆಯ ಬಳಿಕ ಇದೇ 6 ಇಲ್ಲವೇ 7ರಂದು 65 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಆಯ್ಕೆ ತೀವ್ರ ಕಗ್ಗಂಟಾಗಿರುವ ಉಳಿದ 35 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನನಗೂ 2 ಕಡೆ ಸ್ಪರ್ಧೆಗೆ ಅವಕಾಶ ಕೊಡಿ: ಪರಂ
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೆ ತಮಗೂ ಎರಡು ಕಡೆ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂದು ಮಾಜಿ ಡಿಸಿಎಂ ಡಾ| ಜಿ.ಪರಮೇಶ್ವರ್‌ ಹೊಸ ದಾಳ ಉರುಳಿಸಿದ್ದಾರೆ.

Advertisement

ಸಿದ್ದರಾಮಯ್ಯ ಅವರು ವರುಣಾದ ಜತೆಗೆ ಕೋಲಾರದಿಂದಲೂ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಶನಿವಾರ ಕೋಲಾರ ದಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ.

ಈ ಮಧ್ಯೆ ಪರಮೇಶ್ವರ್‌ ಉರುಳಿಸಿರುವ ಹೊಸ ದಾಳ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲೂ ಪರಮೇಶ್ವರ್‌ ಈ ಬಗ್ಗೆ ಚರ್ಚೆ ನಡೆಸಿದರೆಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅವರಂತೆ ಬೇರೆಯವರು 2 ಕಡೆ ಸ್ಪರ್ಧಿಸಲು ಅವಕಾಶ ಇದೆಯೇ ಇಲ್ಲವೇ ಎಂದು ಪ್ರಶ್ನಿಸಿದರೆಂದು ಗೊತ್ತಾಗಿದೆ. ಒಂದು ವೇಳೆ ಪಕ್ಷ ಅನುಮತಿ ನೀಡಿದರೆ ತಾವು ಕೊರಟಗೆರೆ ಜತೆಗೆ ಬೆಂಗಳೂರಿನ ಪುಲಕೇಶಿನಗರದಿಂದಲೂ ಸ್ಪರ್ಧಿಸಲು ಬಯಸಿರುವುದಾಗಿ ಹೇಳಿದರೆಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next