ಮಂಗಳೂರು: ಮತ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷವು ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಷಡ್ಯಂತ್ರ ನಡೆಸುತ್ತಿದ್ದು, ಮಲ್ಪೆ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದವರ ಮೇಲೆ ಮಂಗಳೂರು ನಗರದ ಬೆಂಗ್ರೆಯಲ್ಲಿ ಮಂಗಳವಾರ ನಡೆದಿರುವ ಹಲ್ಲೆ ಇದರ ಭಾಗವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಕಾರ್ಯಕ್ರಮಗಳ ಅಭೂತಪೂರ್ವ ಯಶಸ್ಸಿನಿಂದ ಕಾಂಗ್ರೆಸ್ ಪಕ್ಷ ಗಲಿಬಿಲಿಗೊಂಡಿದೆ. ಅಮಿತ್ ಶಾ ಅವರು ಜಿಲ್ಲೆಗೆ ಬಂದರೆ ಕೋಮುಗಲಭೆಯಾಗುತ್ತದೆ ಎಂಬುದಾಗಿ ಕಾಂಗ್ರೆಸಿಗರು ಕಳೆದ ಒಂದು ತಿಂಗಳಿನಿಂದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಮಲ್ಪೆ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಹಿಂದಕ್ಕೆ ಬರುತ್ತಿದ್ದಾಗ ಬೆಂಗ್ರೆಯಲ್ಲಿ ಬಸ್ ತಡೆದು ನಿಲ್ಲಿಸಿ ಮಾರಕಾಸ್ತ್ರಗಳಿಂದ ಬಸ್‌ನಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದು ಕೋಮು ಗಲಭೆ ಸೃಷ್ಟಿಸಲು ಕಾಂಗ್ರೆಸ್ ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್‌ನಿಂದ ಗೂಂಡಾ ರಾಜಕೀಯ ಪ್ರಾರಂಭವಾಗಿದೆ ಎಂದರು.
ಬಸ್‌ನಲ್ಲಿದ್ದವರು ಘೋಷಣೆ ಹಾಕಿದ್ದು ಗಲಭೆಗೆ ಕಾರಣ ಎಂದು ಇಲ್ಲಿನ ಶಾಸಕರು ಹೇಳಿದ್ದಾರೆ. ಸಮಾವೇಶಗಳಿಗೆ ಹೋದಾಗ ಘೋಷಣೆಗಳನ್ನು ಕೂಗುವುದು ಸಹಜ. ಅವರು ಹಾಕಿರುವುದು ಭಾರತ ಮಾತಾ ಕಿ ಜೈ ಎಂಬ ಘೋಷಣೆ. ಅವರು ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಬಂದಿದ್ದಾರೆ. ಎಲ್ಲಿಯೂ ಗಲಭೆಯಾಗಿಲ್ಲ, ಹಲ್ಲೆಯಾಗಿಲ್ಲ. ಆದರೆ ಬೆಂಗ್ರೆಯಲ್ಲಿ ಮಾತ್ರ ಏಕೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಪ್ರಶ್ನಿಸಿದ ನಳಿನ್, ಶಾಸಕರು ಸರಿಯಾಗಿ ಮಾಹಿತಿ ಪಡೆದುಕೊಂಡು ಹೇಳಿಕೆಗಳನ್ನು ನೀಡಬೇಕಾಗಿತ್ತು. ವಿಧಾನಸಭೆಯಲ್ಲೂ ಗೃಹ ಸಚಿವರು ಸರಿಯಾದ ಮಾಹಿತಿ ಇಲ್ಲದೆ ಹೇಳಿಕೆ ನೀಡುತ್ತಿದ್ದಾರೆ. ಬಸ್ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ ಎಂದು ಆರೋಪಿಸಿದರು.
ತಾನು ಮಂಗಳವಾರ ಬೆಂಗ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಗಾಯಾಳುಗಳನ್ನು ಭೇಟಿಯಾಗಿದ್ದೇನೆ. ಪೊಲೀಸ್ ಇಲಾಖೆ ಹಲ್ಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ತತ್‌ಕ್ಷಣ ಬಂಧಿಸಿ ಕಠಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು, ನಿರಪರಾಧಿಗಳನ್ನು ಬಿಡಬೇಕು ಎಂದ ಅವರು, ಎರಡೂ ಸಮುದಾಯಗಳ ಜನರನ್ನು ಮಾತನಾಡಿಸಿದ್ದೇನೆ. ಜನ ಶಾಂತಿ ಬಯಸುತ್ತಿದ್ದಾರೆ. ಶಾಸಕರು ಇದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಬೆಂಗ್ರೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ, ಅಕ್ರಮ ವಲಸೆ
ಗಾರರು ನೆಲೆಸಿದ್ದಾರೆ ಎಂಬ ದೂರುಗಳಿದ್ದು, ಈ ಬಗ್ಗೆಯೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮುಖಂಡರಾದ ನಿತಿನ್ ಕುಮಾರ್, ಕ್ಯಾ| ಬ್ರಿಜೇಶ್ ಚೌಟ, ಸುದರ್ಶನ್, ವಿಕಾಸ್ ಪುತ್ತೂರು, ಭಾಸ್ಕರಚಂದ್ರ ಶೆಟ್ಟಿ , ಸಂಜಯ ಪ್ರಭು, ಶೋಭೇಂದ್ರ ಉಪಸ್ಥಿತರಿದ್ದರು.