ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಂಗಳವಾರ (ಫೆ.13) ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿಯ ಇತರ ಮುಖಂಡರು ಹಾಜರಿದ್ದರು.
ಇದನ್ನೂ ಓದಿ:Kalaburagi; ಕುಡಾ ಆಯುಕ್ತರ ವರ್ಗಾವಣೆಗೆ ತಡೆಯಾಜ್ಞೆ: ಸರ್ಕಾರಕ್ಕೆ ಮತ್ತೆ ಮುಖಭಂಗ
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಅಶೋಕ್ ಚವಾಣ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದು, ತನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ತಿಳಿಸಿದ್ದರು.
ಇಂದು ನಾನು ಔಪಚಾರಿಕವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಮಹಾರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಕಾರ್ಯನಿರ್ವಹಿಸಲಿದ್ದೇವೆ ಎಂಬ ಭರವಸೆ ನೀಡುವುದಾಗಿ ಚೌಹಾಣ್ ಈ ಸಂದರ್ಭದಲ್ಲಿ ಹೇಳಿದರು.
1986ರಿಂದ 1995ರವರೆಗೆ ಅಶೋಕ್ ಚೌಹಾಣ್ ಮಹಾರಾಷ್ಟ್ರ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 1999ರಿಂದ 2014ರವರೆಗೆ ಮಹಾರಾಷ್ಟ್ರ ಶಾಸಕರಾಗಿದ್ದರು.
2008ರ ಡಿಸೆಂಬರ್ 8ರಿಂದ 2010 ನವೆಂಬರ್ 9ರವರೆಗೆ ಚೌಹಾಣ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರ್ಶ ಹೌಸಿಂಗ್ ಸೊಸೈಟಿ ಹಗಣರದ ಹಿನ್ನೆಲೆಯಲ್ಲಿ ಚೌಹಾಣ್ ಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಕ್ಷ ಸೂಚನೆ ನೀಡಿತ್ತು.
ಮಹಾರಾಷ್ಟ್ರ ರಾಜಕಾರಣದಲ್ಲಿ ಚೌಹಾಣ್ ಕಾಂಗ್ರೆಸ್ ಪಕ್ಷದ ಮೂರನೇ ಪ್ರಭಾವಿ ಮುಖಂಡರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆ ಎಂಬಂತೆ ದಕ್ಷಿಣ ಮುಂಬೈ ಸಂಸದ ಮಿಲಿಂದ್ ದಿಯೋರಾ ಮೊದಲು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಾಬಾ ಸಿದ್ದಿಖಿ ರಾಜೀನಾಮೆ ನೀಡಿದ್ದು, ಇದೀಗ ಅಶೋಕ್ ಚೌಹಾಣ್ ಕೂಡಾ ಕಾಂಗ್ರೆಸ್ ತೊರೆದಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.