ಬೆಂಗಳೂರು: ಪೌರತ್ವ ಕಾಯ್ದೆ ಬೆಂಬಲಿಸಿ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಾತ್ಮಕ ಭಾಷಣ ಮಾಡಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ಕಾಂಗ್ರೆಸ್ ದೂರು ಸಲ್ಲಿಸಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಡಿಜಿಪಿ ಕಚೇರಿಗೆ ತೆರಳಿ, ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಶಾಸಕರಾಗಿದ್ದು, ಪೌರತ್ವ ಕಾಯ್ದೆ ಬೆಂಬಲಿಸಲು ದೇಶಭಕ್ತ ನಾಗರಿಕರ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಸಿಎಎ ಹಾಗೂ ಎನ್‌ಆರ್‌ಸಿ ಬೆಂಬಲಿಸದಿದ್ದರೆ ದೇಶ ಬಿಟ್ಟು ತೊಲಗಿ ಎಂದು ಮಾತನಾಡಿದ್ದಾರೆ.
ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸ್ಥಳೀಯ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು. ಸೋಮಶೇಖರ ರೆಡ್ಡಿಯವರು ನೀವು 17 ಪರ್ಸೆಂಟ್ ಇದೀರಾ ಎಂದು ಅಲ್ಪ ಸಂಖ್ಯಾತರ ವಿರುದ್ಧ ಮಾತ ನಾಡಿ, ಹಿಂದೂಗಳು 80 ರಷ್ಟಿದ್ದು, ನಾವೆಲ್ಲರೂ ಬೀದಿಗೆ ಬಿದ್ದು ಉಫ್ ಎಂದು ಊದಿದರೆ ಕೊಚ್ಚಿ ಹೋಗುತ್ತೀರಿ,
ಶಿವಾಜಿ ಮಹಾ ರಾಜರ ರೀತಿ ಖಡ್ಗ ಬಳಸಿದರೆ ನೀವೆಲ್ಲ ನಿರ್ನಾಮ ವಾಗು ತ್ತೀರಿ. ಮುಸಲ್ಮಾನರು 10 ಜನರನ್ನು ಹುಟ್ಟಿಸಿದರೆ ಹಿಂದುಗಳು 50 ಜನರನ್ನು ಹುಟ್ಟಿಸುತ್ತೇವೆ. ಬೇಕೂಫ್ ಕಾಂಗ್ರೆಸ್‌ನವರ ಮಾತು ಕೇಳಿ ಬೀದಿಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಧಮಕಿ ಹಾಕಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ಪ್ರಕರಣ ದಾಖಲು
ಬಳ್ಳಾರಿ/ಗಂಗಾವತಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಬಳ್ಳಾರಿ ಹಾಗೂ ಗಂಗಾವತಿಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.