ಸಿಂಧದುರ್ಗ : ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಸರ್ಕಾರಿ ಅಧಿಕಾರಿಗೆ ಬ್ಯಾಟ್ ಹಲ್ಲೆ ನಡೆಸಿದ ವಿಚಾರ ಭಾರೀ ಸದ್ದು ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ, ಹೆದ್ದಾರಿ ಇಂಜಿನಿಯರ್ ಮೇಲೆ ಮಣ್ಣು ಸುರಿದು ಇನ್ನೊಂದು ವಿವಾದ ಹುಟ್ಟು ಹಾಕಿದ್ದಾರೆ.
ಕಂಕಾವಲಿ ಪ್ರಾಂತ್ಯದಲ್ಲಿ 600 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಘಟನೆ ನಡೆದಿದೆ. ಪಿಡಬ್ಲ್ಯೂ ಡಿ ಇಂಜಿನಿಯರ್ ಪ್ರಕಾಶ್ ಖಾಂಡೇಕರ್ ಅವರನ್ನು ಕರೆಸಿಕೊಂಡಿದ್ದ ರಾಣೆ, ಕಾಮಾಗಾರಿ ವಿಳಂಬ ಮತ್ತು ರಸ್ತೆಗಳಲ್ಲಿನ ಹೊಂಡಗಳ ಬಗ್ಗೆ ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಸಮರ್ಪಕ ಕಾಮಗಾರಿ, ರಸ್ತೆಗಳ ಹೊಂಡಗಳ ಬಗ್ಗೆ ಪ್ರಶ್ನಿಸಿ ಬಕೆಟ್ ತೆಗೆದು ಕೊಂಡು ಕೆಸರು ನೀರನ್ನು ಇಂಜಿನಿಯರ್ ಮೈಮೇಲೆ ಸುರಿದಿದ್ದಾರೆ. ಅದೇ ಸ್ಥಿತಿಯಲ್ಲಿ ಎರಡು ಸೇತುವೆ ಮೇಲೆ ಕರೆದುಕೊಂಡು ಹೋಗಿ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಶಾಸಕರ ಬೆಂಬಲಿಗರು ಇಂಜಿನಿಯರ್‌ರನ್ನು ಸೇತುವೆಗೆ ಕಟ್ಟಿ ಹಾಕಿ ದಬ್ಬಾಳಿಕೆ ತೋರಿದ್ದಾರೆ.
ಕೆಂಡಾಮಂಡಲರಾಗಿದ್ದ ರಾಣೆ 15 ದಿನಗಳೊಳಗೆ ಸಮಸ್ಯೆ ಬಗೆ ಹರಿಯಬೇಕು ಎಂದು ಇಂಜಿನಿಯರ್‌ಗೆ ಎಚ್ಚರಿಕೆ ನೀಡಿದ್ದಾರೆ.
ನಿತೇಶ್ ರಾಣೆ ಬಿಜೆಪಿ ಬೆಂಬಲಿತ ರಾಜ್ಯಸಭಾ ಸದಸ್ಯ, ಮಾಜಿ ಮಹಾರಾಷ್ಟ್ರ ಸಿಎಂ ನಾರಾಯಣ ರಾಣೆ ಅವರ ಪುತ್ರ.