Advertisement

Congress; ಕರ್ನಾಟಕದಿಂದ ಸ್ಪರ್ಧೆ ಮಾಡಲು ರಾಹುಲ್‌ಗೆ ಎಡ ಪಕ್ಷಗಳ ಸಲಹೆ

12:20 AM Dec 05, 2023 | Team Udayavani |

ತಿರುವನಂತಪುರ: ಮೂರು ರಾಜ್ಯಗಳಲ್ಲಿನ ಸೋಲಿನ ತಪ್ಪುಗಳನ್ನು ತಿದ್ದಿಕೊಳ್ಳಿ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಕಾಂಗ್ರೆಸ್‌ಗೆ ಹೇಳಿದ ಬೆನ್ನಲ್ಲೇ, ಕೇರಳದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡದಂತೆ ಎಡಪಕ್ಷಗಳು ರಾಹುಲ್‌ ಗಾಂಧಿಯವರಿಗೆ ಸಲಹೆ ನೀಡಿವೆ.

Advertisement

ಇದಕ್ಕೆ ಬದಲಾಗಿ ಬಿಜೆಪಿ ಜತೆಗೆ ನೇರ ಕಾದಾಟವಿರುವ ಕರ್ನಾಟಕದಂಥ ರಾಜ್ಯದಲ್ಲಿ ಸ್ಪರ್ಧೆ ಮಾಡಿ ಎಂದು ಹೇಳಿವೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್‌, ಸಿಪಿಐ ನಾಯಕ ಮತ್ತು ಕೇರಳ ಕಂದಾಯ ಸಚಿವ ಕೆ.ರಾಜನ್‌ ಅವರು ಈ ಬಗ್ಗೆ ಸೋಮವಾರ ಬಹಿರಂಗ ಹೇಳಿಕೆ ನೀಡಿದ್ದಾರೆ.

2019ರಲ್ಲೇ ರಾಹುಲ್‌ ಗಾಂಧಿಯವರು ಕೇರಳದ ವಯನಾಡ್‌ನಿಂದ ಸ್ಪರ್ಧೆ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಕಾಂಗ್ರೆಸ್‌, ವಯನಾಡ್‌ ಮುಸ್ಲಿಂ ಬಾಹುಳ್ಯದ ಕ್ಷೇತ್ರವಾಗಿರುವ ಕಾರಣ, ಇದನ್ನೇ ಆಯ್ಕೆ ಮಾಡಿತ್ತು. ಈಗ 2023ರ ಲೋಕಸಭೆ ಚುನಾವಣೆಯಲ್ಲೂ ರಾಹುಲ್‌ ಗಾಂಧಿಯವರು ವಯನಾಡ್‌ನಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದು, ಹೀಗಾಗಿ, ಎಡಪಕ್ಷಗಳು ಬೇರೆ ಕಡೆಗೆ ಕ್ಷೇತ್ರ ನೋಡುವಂತೆ ಹೇಳಿವೆ. ಈ ಮೂಲಕ ಐಎನ್‌ಡಿಐಎನಲ್ಲಿ ಒಡಕು ಇರುವುದನ್ನು ಬಹಿರಂಗ ಮಾಡಿವೆ.

ಸದ್ಯ 3 ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋತಿರುವುದರಿಂದ ಕೆಲವು ಪಕ್ಷಗಳ ವರಸೆ ಬದಲಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರ ಆರಿಸಿಕೊಳ್ಳುವಂತೆ ಸಲಹೆ ನೀಡಿವೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next