Advertisement
ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಣ್ಣತನವನ್ನು ಹೊಂದಿದೆ. ಅವರ ಈ ಸಣ್ಣತನವನ್ನು ಜನರು ಕ್ಷಮಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಸಣ್ಣತನದ ಧೋರಣೆಗೆ ಬಡಜನರು, ರೈತರು ಸೇರಿದಂತೆ ಎಲ್ಲ ಮತದಾರರು ಸಮರ್ಥ ಉತ್ತರ ಕೊಟ್ಟು ಆ ಪಕ್ಷವನ್ನು ರಾಜ್ಯದಲ್ಲಿ ನಾಮಾವಶೇಷಗೊಳಿಸಲಿದ್ದಾರೆ ಎಂದು ತಿಳಿಸಿದರು.
Related Articles
Advertisement
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಒಂದೆಡೆ ನಡೆದಿದೆ. ಇನ್ನೊಂದೆಡೆ ‘ಕಾಂಗ್ರೆಸ್ ಚೋಡೋʼ ಮುಂದುವರಿದಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವಿನ ಜಗಳ ಮುಂದುವರಿಯಲಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಷಡ್ಯಂತ್ರದ, ಭ್ರಷ್ಟಾಚಾರದ ಪಕ್ಷ. ಫೋನ್ ಟ್ಯಾಪಿಂಗ್, ವಿಡಿಯೋ ಟೇಪ್ ಮಾಡುವುದು, ಇಲ್ಲಸಲ್ಲದ ಆರೋಪ ಮಾಡುವುದು ಈ ಪಕ್ಷದ ನಾಯಕರ ಸಣ್ಣತನವನ್ನು ತೋರಿಸುತ್ತದೆ. ವಿಚಾರಶೂನ್ಯವಾದ ಕಾಂಗ್ರೆಸ್‍ನವರು ಇಂಥ ಆರೋಪ ಮಾಡುತ್ತಾರೆ. ಹಗಲಿರುಳು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಬೊಮ್ಮಾಯಿಯವರ ವಿರುದ್ಧ ಇಂಥ ಆಧಾರರಹಿತ ಆರೋಪ ಮಾಡುವ ಕಾಂಗ್ರೆಸ್ಸಿಗರನ್ನು ಎಂದೂ ಕ್ಷಮಿಸುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್‍ಐ ಪ್ರಕರಣಗಳ ರದ್ದು ಕುರಿತಂತೆ ರಾಜ್ಯದ ಬಿಜೆಪಿ ಸರಕಾರ ಪುನರ್ ಪರಿಶೀಲಿಸಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ನಾಯಕರೇ ಇಲ್ಲದ, ದೂರದೃಷ್ಟಿ ರಹಿತ ಕಾಂಗ್ರೆಸ್ ಪಕ್ಷವು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯಿಂದ ನಾಮಾವಶೇಷ ಆಗಲಿದೆ ಎಂದು ನುಡಿದರು. ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ಅವರ ನಡುವೆ ತಳವಾರು ಕಾಳಗ ಮುಂದುವರಿಯುತ್ತಿದೆ ಎಂದ ಅವರು, ಆ ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆಡಳಿತ ವಿರೋಧಿ ಅಲೆ ಅಲ್ಲಿದೆ. ಮುಂದಿನ ವರ್ಷ ನಾವು ಅಲ್ಲಿ ಸರಕಾರ ರಚಿಸುತ್ತೇವೆ ಎಂದು ತಿಳಿಸಿದರು.
ದೇಶದ ಏಕತೆ ಮತ್ತು ಅಖಂಡತೆಗಾಗಿ ಸಂಕಲ್ಪ, ರಾಜ್ಯದ ಗೌರವಕ್ಕೆ ಬದ್ಧತೆಯ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಕೇಂದ್ರದ ಮೋದಿಜಿ ಮತ್ತು ರಾಜ್ಯದ ಬೊಮ್ಮಾಯಿಯವರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಡಬಲ್ ಎಂಜಿನ್ ಸರಕಾರಗಳನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವೂ ನಡೆಯಲಿದೆ ಎಂದು ತಮ್ಮ ಕಲ್ಯಾಣ ಕರ್ನಾಟಕದ ಪ್ರವಾಸದ ಉದ್ದೇಶದ ಸಂಬಂಧದ ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ ಕುರಿತಂತೆ ಬೊಮ್ಮಾಯಿಯವರು ಸಕಾಲದಲ್ಲಿ ಸಮರ್ಪಕ ನಿರ್ಣಯ ಮಾಡಲಿದ್ದಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ದೇಶಾದ್ಯಂತ ಗಲಭೆ, ದಂಗೆ ಕಾರ್ಯದಲ್ಲಿ ಪಿಎಫ್‍ಐ ನಿರತವಾಗಿತ್ತು. ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿತ್ತು. ಆತಂಕವಾದಿ ಘಟನೆಗಳಲ್ಲೂ ಅದು ಒಳಗೊಂಡಿತ್ತು. ದೇಶವನ್ನು ಅಸ್ಥಿರಗೊಳಿಸಲು ವಿದೇಶದಿಂದ ಹಣ ಪಡೆಯುತ್ತಿದ್ದ ಈ ಸಂಸ್ಥೆಯನ್ನು ನಿಷೇಧಿಸಿದ್ದು, ಅತ್ಯಂತ ಉತ್ತಮ ನಿರ್ಧಾರ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ರಾಜಸ್ಥಾನದಲ್ಲೂ ಹಲವು ಜಿಲ್ಲೆಗಳಲ್ಲಿ ನಡೆದ ದಂಗೆ, ಗಲಭೆಗಳಲ್ಲಿ ಪಿಎಫ್‍ಐ ಒಳಗೊಂಡಿತ್ತು. ಕರೋಲಿ, ಜೋಧಪುರ, ಉದಯಪುರ ಜಿಲ್ಲೆಗಳಲ್ಲಿ ಈ ಗಲಭೆಗಳು, ಹಿಂದೂಗಳ ಹತ್ಯೆಗಳು ಆಗಿದ್ದವು ಎಂದ ಅವರು, ಕರ್ನಾಟಕದಲ್ಲೂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಯೋಜಿತ ರೀತಿಯಲ್ಲಿ ಹಿಂದೂಗಳ ಹತ್ಯೆಗಳು ಆಗಿದ್ದವು. ದೇಶವನ್ನು ಅಖಂಡವಾಗಿಡಲು ಪಿಎಫ್‍ಐ ನಿಷೇಧ ಅನಿವಾರ್ಯವಾಗಿತ್ತು ಎಂದರು.
ರಾಜಸ್ಥಾನ, ಹೈದರಾಬಾದ್, ಕರ್ನಾಟಕದ ವಿವಿಧೆಡೆ ನಡೆದ ಹಿಂದೂಗಳ ಹತ್ಯೆಯಲ್ಲಿ ಪಿಎಫ್‍ಐ ಕೈವಾಡ ಮತ್ತು ಷಡ್ಯಂತ್ರ ಇದೆ ಎಂಬುದು ಪತ್ತೆಯಾಗಿತ್ತು. ಹಲವು ರಾಜ್ಯಗಳಲ್ಲಿ ಇಂಥ ಹಿಂಸಾಚಾರ ನಡೆದ ಕಾರಣ ಎನ್‍ಐಎ ಈ ದಾಳಿ ನಡೆಸಿದೆ ಎಂದು ವಿವರಿಸಿದರು.