ಬೆಂಗಳೂರು: ಕೇಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುವ ಹೇಳಿಕೆ ನೀಡಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಕಾಂಗ್ರೆಸ್ ಶಾಸಕರ ನಿಯೋಗವು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲ ತಾವರಚಂದ್ ಗೆಹ್ಲೋತ್ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರ ನಿಯೋಗ ರಾಜ್ಯಪಾಲರನ್ನು ಪಾದಯಾತ್ರೆ ಮೂಲಕ ಭೇಟಿ ಮಾಡಿ ಸಚಿವ ಈಶ್ವರಪ್ಪ ವಿರುದ್ಧ ಮನವಿ ಸಲ್ಲಿಸಿದ್ದೇವೆ. ರಾಷ್ಟ್ರ ಧ್ವಜ ನಮ್ಮ ದೇಶದ ಹೆಮ್ಮೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿ ನೀಡಿದ್ದು ರಾಷ್ಟ್ರ ಧ್ವಜ, ಇದು ತ್ಯಾಗ ಬಲಿದಾನದ ಸಂಕೇತ. ಇಂಥ ರಾಷ್ಟ್ರ ಧ್ವಜಕ್ಕೆ ಈಶ್ವರಪ್ಪ ಅವಮಾನ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಹೇಳಿದ್ದೇವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೇವೆ ಎಂದು ಹೇಳಿಕೆ ನೀಡಿದ್ದರು, ಇದು ನಮ್ಮ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವಂತಹ ವಿಚಾರ, ಅಕ್ಷ್ಯಮ್ಯ ಅಪರಾಧ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಕಾನೂನಿನಲ್ಲಿದೆ. ದೇಶದ ಪತ್ರಿಯೊಬ್ಬ ಪ್ರಜೆಯು ಸಂವಿಧಾನವನ್ನ ಗೌರವಿಸಬೇಕು. ಅದನ್ನ ಗೌರವಿಸದೇ ಇದ್ದಲ್ಲಿ ಅಪರಾಧ. ಈಶ್ವರಪ್ಪ ಹಿರಿಯ ಮಂತ್ರಿ, ದುರುದ್ದೇಶದಿಂದ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದರು.
ರಾಷ್ಟ್ರ ಧ್ವಜಕ್ಕೆ ಅಮಮಾನ ಮಾಡಿರುವ ಈಶ್ವರಪ್ಪ ಅವರನ್ನು ವಜಾ ಮಾಡಿ ಎಂದು ಹೇಳಿದರೆ, ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಮಾಡಿರೋದು ದೇಶ ದ್ರೋಹದ ಕೆಲಸ. ಅದನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿಯರದ್ದೂ ದೇಶದ್ರೋಹದ ಕೆಸಲ ಎಂದು ಕಿಡಿಕಾರಿದ ಸಿದ್ದರಾಮಯ್ಯ, ನಾವು ಐದು ದಿನ ಅಹೋರಾತ್ರಿ ಧರಣಿ ಮಾಡಿದೆವು, ಚರ್ಚೆ ಮಾಡೋಕ್ಕೆ ಬಿಡಲಿಲ್ಲ, ನಿಳುವಳಿ ಮಂಡಿಸಿದ್ರೆ ಅದನ್ನ ತಿರಸ್ಕಾರ ಮಾಡಲಾಯಿತು ಎಂದು ಆಕ್ರೋಶ ಹೊರಹಾಕಿದರು.
ನಿಯೋಗದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಸಚಿವ ಎಚ್.ಕೆ. ಪಾಟೀಲ್, ಆರ್.ವಿ. ದೇಶವಪಾಂಡೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ , ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್ ಮತ್ತಿತರರು ಇದ್ದರು.