ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳುವ ಮೂಲಕ ಜಿಲ್ಲೆಯ ರಾಜಕಾರಣಕ್ಕೆ ಹೊಸ ದಿಕ್ಕು ತಂದುಕೊಟ್ಟು ಲೋಕ ಸಭಾ ಚುನಾವಣೆಯ ಫಲಿತಾಂಶ ಮುಗಿದ ಬೆನ್ನಲ್ಲೇ ಸೋಲಿನ ಕಹಿ ಕಂಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೌನಕ್ಕೆ ಜಾರಿದ್ದು, ಬಿಜೆಪಿ ನಾಯಕರು, ಕಾರ್ಯಕರ್ತರು ಗೆಲುವಿನ ಉತ್ಸಾಹದಲ್ಲಿ ತೇಲಾಡುತ್ತಿದ್ದಾರೆ.
ಭದ್ರಕೋಟೆ ಛಿದ್ರ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ, ನಗರಸಭೆಯಿಂದ ಹಿಡಿದು ಜಿಪಂ, ತಾಪಂ ಹಾಗೂ ಗ್ರಾಪಂ ಗಳಲ್ಲಿ ಬೆರಣಿಕೆಯಷ್ಟು ಸ್ಥಾನಗಳನ್ನು ಬಿಟ್ಟರೆ ಯಾವುದೇ ಸ್ಥಳೀಯ ಸಂಸ್ಥೆ ಗಳಲ್ಲಿ ಆಡಳಿತ ಹಿಡಿಯುವಷ್ಟು ಪ್ರಭಾವ ಕೂಡ ಹೊಂದಿರದ ಬಿಜೆಪಿ ಈಗ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಫಲಿತಾಂಶ ಬಿಜೆಪಿಯೇತರ ರಾಜಕೀಯ ಪಕ್ಷಗಳ ನಿದ್ದೆಗಡಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬ ಹೆಗ್ಗಳಿಕೆ ಹೊಂದಿತ್ತು. ದಶಕಗಳ ರಾಜಕಾರಣ ದಲ್ಲಿ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಶಾಸನ ಸಭೆಯ ಚುನಾವಣೆ ಗಳಲ್ಲಿ ಕೂಡ ಜಯಭೇರಿ ಬಾರಿಸಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೋಟೆ ಛಿದ್ರವಾಗಿದ್ದು, ಕೈ, ಜೆಡಿಎಸ್ ಹಾಗೂ ಸಿಪಿಎಂ ಪಕ್ಷಗಳಲ್ಲಿ ಸಂಚಲನ ಉಂಟು ಮಾಡಿದೆ.
ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇ ಗೌಡ ಕಾಂಗ್ರೆಸ್,ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ವಿರುದ್ಧ 1,81 ಲಕ್ಷ ಮತಗಳ ಅಂತರದಿಂದಗೆಲುವು ಸಾಧಿಸಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಚುನಾವಣೆ ಫಲಿತಾಂಶ ಕ್ಷೇತ್ರದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ಕ್ಷೇತ್ರ ಗಳ ಪೈಕಿ ಬಿಜೆಪಿ ಯಲಹಂಕ ಬಿಟ್ಟರೆ ಉಳಿದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳ ಶಾಸಕರದ್ದೇ ಪಾರುಪತ್ಯ ಇತ್ತು. ಆದರೂ ಲೋಕ ಸಭಾ ಚುನಾವಣೆಯಲ್ಲಿ ಮೈತ್ರಿಗೆ ಭಂಗ ಉಂಟಾಗಿದ್ದು, ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ. ಫಲಿತಾಂಶದಬಗ್ಗೆ ದಳ ನಾಯಕರು ಮೌನ ವಹಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸೋಲಿನ ಪರಾಮರ್ಶೆ: ಬಿಜೆಪಿ ಕ್ಷೇತ್ರ ದಲ್ಲಿ ಖಾತೆ ತೆರೆದು ಸಂಭ್ರಮದಲ್ಲಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೋಲಿನ ಆತ್ಮಾವಲೋಕನ ದಲ್ಲಿ ತೊಡಗಿದ್ದಾರೆ. ಫಲಿತಾಂಶ ಹೊರ ಬಂದ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಂಗ್ರೆಸ್ ನಾಯಕರು, ಮುಖಂಡರು ಕಂಡು ಬರುತ್ತಿಲ್ಲ. ಬಹಳಷ್ಟು ನಾಯಕರ ಮೊಬೈಲ್‌ಗಳು ಸ್ಪಿಚ್‌ಆಫ್ ಆಗಿರುವುದು ಕಂಡು ಬಂದಿದೆ. ಆದರೆ ಪಕ್ಷದಪರವಾಗಿ ನಿಷ್ಠೆಯಿಂದ ದುಡಿದಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರಸೋಲಿನ ಕರಾಳ ಛಾಯೆ ಎದ್ದು ಕಾಣುತ್ತಿದ್ದು, ಸೋಲಿಗೆ ಕಾರಣಗಳನ್ನುಹುಡುಕುತ್ತಿದ್ದಾರೆ.