Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೈ ನಾಯಕರ ಕಸರತ್ತು

11:26 PM Aug 25, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ತೀವ್ರ ಕಸರತ್ತು ನಡೆಸಿದ್ದು, ಅದನ್ನು ತಪ್ಪಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಪ್ರಯತ್ನ ನಡೆಸಿದೆ. ಇದೇ ವೇಳೆ, ಲಿಂಗಾಯತ ಸಮುದಾಯ ಹಾಗೂ ಉತ್ತರ ಕರ್ನಾಟಕದ ಪ್ರಾತಿನಿಧ್ಯಕ್ಕಾಗಿ ಪಕ್ಷದ ಸಾರಥ್ಯ ವಹಿಸಿಕೊಳ್ಳಲು ಎಂ.ಬಿ.ಪಾಟೀಲ್‌ ಯತ್ನ ನಡೆಸಿದ್ದಾರೆ.

Advertisement

ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾಯಕರು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಅದರ ಜತೆಗೆ ಒಬ್ಬರಿಗೆ ತಪ್ಪಿಸಿ, ಮತ್ತೂಬ್ಬರಿಗೆ ಆ ಹುದ್ದೆ ಕೊಡಿಸುವ ತಂತ್ರಗಾರಿಕೆಯೂ ನಡೆಯುತ್ತಿದೆ. ಪ್ರತಿಪಕ್ಷ ನಾಯಕನ ಆಯ್ಕೆ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ಪ್ರಮುಖವಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವುದರಿಂದ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ಜೋರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಾರಥ್ಯ ವಹಿಸಿಕೊಳ್ಳಲು ಕಸರತ್ತು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ರಾಜ್ಯದಲ್ಲಿ ಪಕ್ಷದ ಸಾರಥ್ಯ ವಹಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಅಧ್ಯಕ್ಷ ಪಟ್ಟಕ್ಕೇರಲು ಪ್ರಯತ್ನ ನಡೆಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಕ್ಕೆ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ ಸೇರಿ ಕೇಂದ್ರದ ಮಾಜಿ ಸಚಿವರು ಹಾಗೂ ಮಾಜಿ ಸಂಸದರು ನಿಂತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕೆಪಿಸಿಸಿಯನ್ನು ಸಿದ್ದರಾಮಯ್ಯ ಅವರ ಹಿಡಿತದಿಂದ ತಪ್ಪಿಸಲು ಕಾಂಗ್ರೆಸ್‌ನ ಹಿರಿಯ ನಾಯಕರು ಪರೋಕ್ಷ ವಾಗಿ ಅವರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ.

ಜಿ.ಪರಮೇಶ್ವರ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವ ಸಂದರ್ಭದಲ್ಲಿಯೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆಗಲೂ ಅವರು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಅವರಿಗೆ ಹುದ್ದೆ ತಪ್ಪಿಸಿದ್ದರು ಎನ್ನಲಾಗುತ್ತಿದೆ. ಅಲ್ಲದೇ ಎಚ್‌.ಕೆ. ಪಾಟೀಲ್‌ ಅವರು ಅಧ್ಯಕ್ಷರಾದರೂ ತಮ್ಮ ಹಿಡಿತ ತಪ್ಪುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ತಮ್ಮ ಆಪ್ತರಾಗಿರುವ ದಿನೇಶ್‌ ಗುಂಡೂರಾವ್‌ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ,

ತಮ್ಮ ಸೂಚನೆಯಂತೆ ಎಲ್ಲವೂ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆಂಬ ಆರೋಪ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರೋಧಿ ಬಣದಿಂದ ಕೇಳಿ ಬರುತ್ತಿದೆ. ಈ ಬಾರಿ ಹೇಗಾದರೂ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ, ಮುಂಬರುವ ವಿಧಾನಸಭೆ ಚುನಾವಣೆಯನ್ನು ತಮ್ಮ ನೇತೃತ್ವದಲ್ಲಿಯೇ ಎದುರಿಸಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೇರಬಹುದು ಎನ್ನುವ ಲೆಕ್ಕಾಚಾರವನ್ನು ಡಿ.ಕೆ.ಶಿವಕುಮಾರ್‌ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಕೃಷ್ಣ ಬೈರೇಗೌಡ ಪರ ವಕಾಲತ್ತು: ಡಿ.ಕೆ.ಶಿವಕುಮಾರ್‌ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ವಿರುದ್ಧ ಪ್ರಕರಣಗಳಿರುವುದರಿಂದ ಅವರಿಗೆ ಪಕ್ಷದ ಜವಾಬ್ದಾರಿ ವಹಿಸಿದರೆ ಬಿಜೆಪಿಗೆ ಅದೇ ಅಸ್ತ್ರವಾಗುವುದರಿಂದ ಪಕ್ಷದ ಮೇಲೆ ಅದು ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ವಾದವನ್ನು ಹೈಕಮಾಂಡ್‌ ಮುಂದಿಡುವ ಲೆಕ್ಕಾಚಾರ ಹಾಕಿದ್ದಾರೆ.

ಅಲ್ಲದೇ ಮೈತ್ರಿ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ದೇವೇಗೌಡರ ಕುಟುಂಬದ ಜತೆಗೆ ಮೃದು ಧೋರಣೆ ಅನುಸರಿಸಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಜತೆಗೆ ಬರುವುದು ಅನುಮಾನವೆಂಬ ಆಕ್ಷೇಪವನ್ನು ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಜಾತಿ ಲೆಕ್ಕಾಚಾರದಲ್ಲಿ ಅವರನ್ನೇ ನೇಮಕ ಮಾಡಲು ಹೈಕಮಾಂಡ್‌ ಒಲವು ತೋರಿದರೆ, ಒಕ್ಕಲಿಗ ಸಮುದಾಯದ ಮತ್ತೋರ್ವ ನಾಯಕ ಕೃಷ್ಣ ಬೈರೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಡ ಹೇರಲು ಮುಂದಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಎಂ.ಬಿ.ಪಾಟೀಲ್‌ ಕೂಡ ಆಕಾಂಕ್ಷಿ: ಎರಡು ಬಣಗಳ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಕಸರತ್ತು ನಡೆದಿರುವ ಬೆನ್ನಲ್ಲೇ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದಾಗ ಹೈಕಮಾಂಡ್‌ ಅವರಿಗೆ ಕೆಪಿಸಿಸಿ ಜವಾಬ್ದಾರಿ ವಹಿಸುತ್ತದೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಪಾಟೀಲರೇ ಆಗ ನಿರಾಕರಿಸಿದ್ದರು ಎಂಬ ಮಾತುಗಳೂ ಕೇಳಿ ಬಂದಿದ್ದವು.

ಆದರೆ, ಈಗ ಅವರೂ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ ಕಡೆಗೆ ಸೆಳೆಯಲು ಲಿಂಗಾಯತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಬಿ.ಎಸ್‌.ಯಡಿಯೂರಪ್ಪ ಅವರ ನಂತರ ಎರಡನೇ ತಲೆಮಾರಿನ ಲಿಂಗಾಯತ ನಾಯಕರು ರಾಜ್ಯಮಟ್ಟದಲ್ಲಿ ಸಮುದಾಯದ ನಾಯಕತ್ವ ವಹಿಸಿಕೊಂಡರೆ ಪಕ್ಷವನ್ನು ಸುಲಭವಾಗಿ ಅಧಿಕಾರದ ಗದ್ದುಗೆಗೆ ತರಬಹುದು ಎನ್ನುವ ಆಲೋಚನೆ ಹೊಂದಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ತಮ್ಮ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ನೇರವಾಗಿ ಮುಖ್ಯಮಂತ್ರಿ ಗಾದಿಗೇರಲು ಅನುಕೂಲವಾಗಲಿದೆ ಎನ್ನುವುದು ಎಂ.ಬಿ. ಪಾಟೀಲ್‌ ಅವರ ಲೆಕ್ಕಾಚಾರ. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದಲ್ಲಿ ಪಕ್ಷವನ್ನು ಬಿಜೆಪಿಗೆ ಪ್ರಬಲ ಸ್ಪರ್ಧಿಯಾಗಿ ಸಂಘಟಿಸಲು ಬಣ ರಾಜಕೀಯವನ್ನು ನಿಯಂತ್ರಿಸಿ ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಕೆಪಿಸಿಸಿ ಜವಾಬ್ದಾರಿ ವಹಿಸುವ ಸಾಧ್ಯತೆ ಇರುವುದರಿಂದ ಪ್ರತಿಪಕ್ಷದ ನಾಯಕನ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಗಳು ನಿರ್ಧಾರವಾದ ನಂತರ ಅಧ್ಯಕ್ಷ ಸ್ಥಾನದ ನಿರ್ಧಾರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next