ಹೈದರಾಬಾದ್: ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆಯೇ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಘೋಷಿಸಿಕೊಳ್ಳುವ ಆಸ್ತಿ ವಿವರ ಕೂಡಾ ಬಹಿರಂಗವಾಗುತ್ತಿದ್ದು, ತೆಲಂಗಾಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೊಂಡ ವಿಶ್ವೇಶ್ವರ ರೆಡ್ಡಿ ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 895 ಕೋಟಿ ರೂಪಾಯಿ! ಇದರೊಂದಿಗೆ ಆಂಧ್ರ ಮತ್ತು ತೆಲಂಗಾಣ ರಾಜ್ಯದ ಅತೀ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ವಿಶ್ವೇಶ್ವರ ರೆಡ್ಡಿ ನಾಮಪತ್ರ ಸಲ್ಲಿಸುವಾಗ ನೀಡಿರುವ ಅಫಿದವಿತ್ ಪ್ರಕಾರ ಅವರ ಆಸ್ತಿ ವಿವರ ಈ ರೀತಿ ಇದೆ..
ವಿಶ್ವೇಶ್ವರ ರೆಡ್ಡಿಯ ಸ್ವಂತ ಚರಾಸ್ತಿ ಮೌಲ್ಯ 223 ಕೋಟಿ ರೂಪಾಯಿ, ಪತ್ನಿ, ಅಪೋಲೋ ಆಸ್ಪತ್ರೆ ಜಂಟಿ ಆಡಳಿತ ನಿರ್ದೇಶಕಿ ಕೆ.ಸಂಗೀತಾ ರೆಡ್ಡಿ ಅವರ ಚರಾಸ್ತಿ ಮೌಲ್ಯ 613 ಕೋಟಿ ರೂಪಾಯಿ ಹಾಗೂ ಪುತ್ರನ ಹೆಸರಿನಲ್ಲಿರುವ ಚರಾಸ್ತಿಯ ಮೌಲ್ಯ 20 ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ.
ಅಲ್ಲದೇ ವಿಶ್ವೇಶ್ವರ ರೆಡ್ಡಿ ಹೆಸರಿನಲ್ಲಿ 36 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ ಪತ್ನಿ ಹೆಸರಿನಲ್ಲಿ 1.81 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದಿರುವುದಾಗಿ ಅಫಿಡವಿತ್ ನಲ್ಲಿ ತಿಳಿಸಿದ್ದಾರೆ. 2014ರಲ್ಲಿ ಚುನಾವಣೆಗೆ ಸ್ಪರ್ಧಿಸಿದ ವೇಳೆ ಸಲ್ಲಿಸಿದ್ದ ಅಫಿಡವಿತ್ ನಲ್ಲಿ 528 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದರು.
ಕಳೆದ ಡಿಸೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶ್ವೇಶ್ವರ್ ರೆಡ್ಡಿ ಗೆಲುವು ಸಾಧಿಸಿದ್ದರು. ಬಳಿಕ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕುಟುಂಬದ ಆಸ್ತಿ ಒಟ್ಟು ಮೌಲ್ಯ 574 ಕೋಟಿ ರೂಪಾಯಿ ಹಾಗೂ ವೈಎಸ್ ಆರ್ ಪಕ್ಷದ ವರಿಷ್ಠ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಪತ್ನಿಯ ಆಸ್ತಿ ಮೌಲ್ಯ 500 ಕೋಟಿ ರೂಪಾಯಿ ಎಂದು ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದರು.