ಬೆಂಗಳೂರು: ಟಿಕೆಟ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುವ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ವಿರುದ್ಧ ಟ್ವೀಟ್ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ತಮ್ಮ ಟ್ವೀಟರ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಖಾತೆಯಿಂದ ಪೋಸ್ಟ್ ಮಾಡಿರುವ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಎಐಸಿಸಿ ಅಧಿವೇಶನ ನಡೆಸುತ್ತಿದ್ದಾರೆ. ಈ ಸಂದರ್ಭವೇ ವೀರಪ್ಪ ಮೊಯ್ಲಿ ಟ್ವೀಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ವಿರೋಧ ಪಕ್ಷ ಬಿಜೆಪಿ ಮಾಡುತ್ತಿದ್ದ 10 ಪರ್ಸೆಂಟ್ ಸರ್ಕಾರ ಎಂಬ ಆರೋಪಕ್ಕೆ ಪುಷ್ಠಿ ನೀಡಿದಂತಿತ್ತು. ಮೊಯ್ಲಿ ಟ್ವೀಟ್ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಮಾಹಿತಿ ಕೇಳಿದ್ದು, ತಮ್ಮ ಟ್ವೀಟ್‌ಗೆ ಯಾವ ದಾಖಲೆಯಿದೆ ಎಂದು ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರ ಹರ್ಷ ತಮ್ಮ ಟ್ವೀಟರ್ ಖಾತೆಯನ್ನು ನಿರ್ವಹಣೆ ಮಾಡಲು ಖಾಸಗಿ ಕಂಪನಿಗೆ ನೀಡಿದ್ದಾರೆಂದು ತಿಳಿದು ಬಂದಿದೆ. ಅವರ ಗಮನಕ್ಕೆ ತಾರದೇ ಟ್ವೀಟರ್ ಕಂಪನಿ ನಿರ್ವಹಣೆ ಮಾಡುವವರು ಈ ರೀತಿಯ ಪಕ್ಷ ವಿರೋಧಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟ್ವೀಟರ್ ಖಾತೆ ನಿರ್ವಹಿಸುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಟ್ವೀಟರ್ ಪೋಸ್ಟ್ ವಿವಾದಕ್ಕೆ ಕಾರಣವಾದ ತಕ್ಷಣ ಎಚ್ಚೆತ್ತುಕೊಂಡ ವೀರಪ್ಪ ಮೊಯ್ಲಿ ಅದು ನನ್ನ ಟ್ವೀಟ್ ಅಲ್ಲ. ನನ್ನ ಟ್ವೀಟರ್ ಖಾತೆ ಹ್ಯಾಕ್ ಆಗಿದೆಯಾ ಎನ್ನುವುದರ ಬಗ್ಗೆ ಪರಿಶೀಲನೆ ಮಾಡುತ್ತೇನೆ. ನನ್ನ ಮಗ ಕೂಡ ಇಂಥ ಟ್ವೀಟ್ ಮಾಡಿಲ್ಲ. ನಾನು ಪಕ್ಷದ ವಿಚಾರದಲ್ಲಿ ಎಂದೂ ಈ ರೀತಿ ಮಾಡುವುದಿಲ್ಲ.ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ವೀರಪ್ಪ ಮೊಯ್ಲಿಯವರೇ ವಿವರಣೆ ನೀಡಿರುವುದರಿಂದ ಪ್ರಕರಣವನ್ನು ಹೆಚ್ಚು ಬೆಳೆಸದೇ ಇಲ್ಲಿಗೇ ಅಂತ್ಯ ಹಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ತಮ್ಮ ವಿರುದ್ಧ ಆರೋಪ ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಮಹದೇವಪ್ಪ, ಮೊಯ್ಲಿಯವರೇ ಎಲ್ಲದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಏನೇ ಮಾಹಿತಿ ಬೇಕೆಂದರೂ ಅವರನ್ನೇ ಕೇಳಿ ಎಂದು ಜಾರಿಕೊಂಡಿದ್ದಾರೆ. ಮೊಯ್ಲಿಯವರ ಟ್ವೀಟ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಹದೇವಪ್ಪ ಅವರ ಬೆನ್ನಿಗೆ ನಿಂತಿದ್ದಾರೆ. ಸಚಿವ ಸಂಪುಟದಲ್ಲಿ ಮಹದೇವಪ್ಪ ರಸ್ತೆ ನಿರ್ಮಾಣ ಕಾರ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಕೆಲಸ
ನಿರ್ವಹಿಸುವ ಮಂತ್ರಿಗಳಲ್ಲಿ ಅವರೂ ಒಬ್ಬರು ಎಂದು ಸಮರ್ಥಿಸಿಕೊಂಡಿದ್ದಾರೆ.
ಮೊಯ್ಲಿ ಟ್ವೀಟ್ ಬಿಜೆಪಿ
ಹ್ಯಾಕ್ ಮಾಡಿದ್ದು
ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರ ಟ್ವೀಟರ್ ಖಾತೆಯನ್ನು ಬಿಜೆಪಿ ಹ್ಯಾಕ್ ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಬೆದರಿಕೆ ಹಾಕಿದ್ದ ಯಡಿಯೂರಪ್ಪ ಈಗ ಸಂಶಯಾತ್ಮಕವಾಗಿ ಓಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.