ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಯಾವ ದೇಶಕ್ಕೂ ದ್ರೌಪದಿ ಮುರ್ಮು ಅವರಂತಹ ರಾಷ್ಟ್ರಪತಿ ಸಿಗಬಾರದು. “ಚಮಚಾಗಿರಿ’ ಮಾಡಲು ಕೂಡ ಒಂದು ಮಿತಿ ಇದೆ. ದೇಶದ ಶೇ.70ರಷ್ಟು ಜನರು ಗುಜರಾತ್‌ನ ಉಪ್ಪು ತಿನ್ನುತ್ತಾರೆ ಎಂದು ದ್ರೌಪದಿ ಮುರ್ಮು ಹೇಳುತ್ತಾರೆ. ಕೇವಲ ಉಪ್ಪು ತಿಂದು ಜೀವಿಸಲು ಆರಂಭಿಸಿದರೆ ಆಗ ಅವರಿಗೆ ಅದರ ಅರಿವಾಗುತ್ತದೆ,’ ಎಂದು ಟ್ವೀಟ್ ಮಾಡಿದ್ದರು.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕ ಶೆಹಬಾಜ್ ಪೂನಾವಾಲ, “ಕಾಂಗ್ರೆಸ್‌ನ ಅಜಯ್ ಕುಮಾರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೂತ, ಅಧಿರ್ ರಂಜನ್ ಚೌಧರಿ ರಾಷ್ಟ್ರಪತ್ನಿ ಎಂದು ಟೀಕಿಸಿದ್ದರು. ಉದಿತ್ ರಾಜ್ ಬುಡಕಟ್ಟು ಸಮುದಾಯಕ್ಕೆ ಮಾಡಿದ ಅವಮಾನವನ್ನು ಬೆಂಬಲಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಘಟನೆಯಿಂದ ಮುಜುಗರಕ್ಕೆ ಒಳಗಾದ ಕಾಂಗ್ರೆಸ್ ವಿವಾದದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಇದೇ ವೇಳೆ, ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಶಾಸಕ ಲಕ್ಷ್ಮಣ್ ಸಿಂಗ್ ಒತ್ತಾಯಿಸಿದ್ದಾರೆ. ಈ ನಡುವೆ, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಅ.10ರ ಒಳಗಾಗಿ ವಿವರಣೆ ನೀಡುವಂತೆಯೂ ಸೂಚಿಸಿದೆ.
ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ತೇಪೆ ಹಚ್ಚಿರುವ ಉದಿತ್ ರಾಜ್, “ಹೇಳಿಕೆ ನನ್ನ ಸ್ವಂತ ಅಭಿಪ್ರಾಯ. ಕಾಂಗ್ರೆಸ್‌ಗೂ ಅದಕ್ಕೂ ಸಂಬಂಧವಿಲ್ಲ. ದಲಿತರು ಮತ್ತು ಬುಡಕಟ್ಟು ಜನಾಂಗದವರ ಬಗ್ಗೆ ಗೌರವವಿದೆ,’ ಎಂದು ಟ್ವೀಟ್ ಮಾಡಿದ್ದಾರೆ.