ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಬಿಜೆಪಿಯಲ್ಲಿ ಮತ್ತೂಬ್ಬ ಸಮರ್ಥರು ಯಾರೂ ಇಲ್ಲ. ಅದಕ್ಕೆ ಆ ಪಕ್ಷದಲ್ಲಿ ಬೀದಿ ಕಾಳಗ ನಡೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಿ.ಪಿ. ಯೋಗೇಶ್ವರಗೆ ಲೂಟಿ ಹೊಡೆಯುವ ಖಾತೆ ಸಿಗಲಿಲ್ಲವೆಂದು ಸಿಎಂ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರೇ ಆರೋಪಿಸಿದ್ದಾರೆ. ಇದು ಬಿಜೆಪಿಯ ಬೀದಿರಂಪ ಅಲ್ಲದೆ ಮತ್ತೇನು? ಯಡಿಯೂರಪ್ಪ ಬಗ್ಗೆ ವೈಯಕ್ತಿಕವಾಗಿ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ. ಮನುಷತ್ವದ ಪ್ರೀತಿ ಇದೆ ಎಂದರು.
ಅತ್ಯಾಚಾರ ಪ್ರಕರಣದಲ್ಲಿರುವ ವ್ಯಕ್ತಿ ಗೃಹ ಸಚಿವರನ್ನು ಭೇಟಿಯಾಗಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಆದರೆ ಅವರನ್ನು ಬಂ ಧಿಸುವ ಯಾವ ಯತ್ನ ಆಗಿಲ್ಲ. ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಕ್ಷಣೆಗೆ ಗೃಹ ಸಚಿವರು, ಸರ್ಕಾರ ನಿಂತಿದೆಯೇ. ಆರೋಪಿ ಸ್ಥಾನದಲ್ಲಿದ್ದವರು ಗೃಹ ಸಚಿವರನ್ನು ಭೇಟಿ ಮಾಡುತ್ತಾರೆಂದರೆ ಏನರ್ಥ? ತಕ್ಷಣವೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದರು.
ರಮೇಶ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಲ್ಲದೆ ಸಂತ್ರಸ್ತೆ ಕೂಡ ಹೇಳಿಕೆ ಕೊಟ್ಟಿದ್ದಾಳೆ. ಆದಾಗ್ಯೂ ಸರ್ಕಾರ ಆರೋಪಿಯನ್ನು ಏಕೆ ಬಂಧಿ ಸಿಲ್ಲ. ಇಡೀ ದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಿಂದ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಾದ ಮೇಲೂ ಆರೋಪಿಯನ್ನು ಬಂಧಿಸದಿರುವ ಪ್ರಕರಣ ಇದೇ ಮೊದಲಾಗಿರಬೇಕು. ಪ್ರಕರಣದ ಎಸ್‌ಐಟಿ ತನಿಖಾಧಿಕಾರಿಯನ್ನು ರಜೆ ಮೇಲೆ ಕಳುಹಿಸಿದ್ದಾರೆ. ಇದೆಲ್ಲ ನೋಡಿದರೆ ರಮೇಶ ಜಾರಕಿಹೊಳಿ ರಕ್ಷಣೆಗೆ ಸರ್ಕಾರ ನಿಂತಿದೆ ಎಂದು ಅನ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ವಿಫಲ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕು ನಿಯಂತ್ರಣಕ್ಕೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಆಕ್ಸಿಜನ್ ಮತ್ತು ಐಸಿಯು ಬೆಡ್ ಇಲ್ಲ. ವೆಂಟಿಲೇಟರ್ ಸಿಗುತ್ತಿಲ್ಲ. ಇದರಿಂದ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಚಾಮರಾಜನಗರದ ಸಾವಿನ ಅಂಕಿ-ಅಂಶದಲ್ಲಿ ಮೊದಲು ಸುಳ್ಳು ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟ ಸಚಿವರು ಏಕೆ ಸುಳ್ಳು ಹೇಳಿದರು? ಎಲ್ಲಾ ಕಡೆ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಮಾಡಿದವರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು. ಇದು ಅತ್ಯಂತ ಹೇಯ ಅಪರಾಧ. ಇಂತಹ ಪ್ರಕರಣಗಳು ಮರುಕಳಿಸಿದಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆ ಕರ್ತವ್ಯ ಎಂದರು. ಮುಖಂಡರಾದ ಪ್ರಕಾಶ ರಾಠೊಡ, ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ನಾಗರಾಜ ಛಬ್ಬಿ ಮೊದಲಾದವರಿದ್ದರು.