Advertisement

ರಾಜೀನಾಮೆ ಹಿಂದೆ ಪಿತೂರಿ:ಅಂದು ಬಸವಣ್ಣ ಇಂದು BSY:ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಬೇಸರ

07:07 PM Jul 26, 2021 | Team Udayavani |

ಬೆಳಗಾವಿ: ಮನುವಾದಿಗಳು 12ನೇ ಶತಮಾನದಲ್ಲಿ ಬಸವಣ್ಣನವರನ್ನು ಅಧಿಕಾರದಿಂದ ಕೆಳಗಿಳಿಸಿದಂತೆ, ಇಂದು ಕೂಡ ಪಿತೂರಿ ಮಾಡಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

Advertisement

ಗೋಕಾಕ ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ 12ನೇ ಶತಮಾನ ನೆನಪಾಗುತ್ತಿದೆ. 1000 ವರ್ಷಗಳ ಹಿಂದೆ ಬಸವಣ್ಣನವರು ಮಂತ್ರಿಗಳಾಗಿದ್ದರು. ಅಂದು ಕೂಡ ಮನುವಾದಿಗಳು ಅವರನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿ ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 2 ತಿಂಗಳಿಂದ ಈ ಬಗ್ಗೆ ಚರ್ಚೆಯಾಗುತ್ತಿತ್ತು. ಈಗ ಯಡಿಯೂರಪ್ಪ ಅಧಿಕಾರದಿಂದ ಇಳಿದಿದ್ದಾರೆ. ಆದರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ರೀತಿ ಸರಿಯಲ್ಲ. ಅವರಿಗೆ ಪಕ್ಷ ಹಾಗೂ ಹೈಕಮಾಂಡ್ ಒತ್ತಡ ಹೇರಿದ್ದಾರೆ. ಒತ್ತಡದಿಂದಲೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಒಬ್ಬ ಜನನಾಯಕ. ಅವರು ಭಾವುಕರಾಗಿ ಭಾಷಣ ಮಾಡಿದ್ದು  ನೋಡಿದರೆ ಅವರ ಮೇಲೆ ಒತ್ತಡ ಹೇರಿರುವುದು ಗೊತ್ತಾಗುತ್ತಿದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಹಿರಿಯ ನಾಯಕರನ್ನು ಗೌರವಯುತವಾಗಿ ಹೊರಹೋಗಲು ಅವಕಾಶ ಮಾಡಿಕೊಡಬೇಕು. ಯಡಿಯೂರಪ್ಪ ಅವರಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂದರು.

ಬಸವಣ್ಣನವರ ರೀತಿಯಲ್ಲಿ ಯಡಿಯೂರಪ್ಪನವರು ಕೂಡ ಮನುವಾದಿಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು

Advertisement

ಯಡಿಯೂರಪ್ಪ ನವರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ ಅಥವಾ ನಷ್ಟ ಈಗಲೇ ಗೊತ್ತಾಗುವುದಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ನಮ್ಮ ಪಕ್ಷದ ಸಂಘಟನೆ, ಹೋರಾಟ ಇದೇ ರೀತಿ ಮುಂದುವರೆಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next