Advertisement

ಸರ್ಕಾರದ ಕೋವಿಡ್‌ ಅಂಕಿ-ಅಂಶ ಸತ್ಯಕ್ಕೆ ದೂರ: ಲಾಡ್‌

09:37 PM Jul 18, 2021 | Team Udayavani |

ಕಲಘಟಗಿ:ಮತಕ್ಷೇತ್ರದಾದ್ಯಂತ ಕೋವಿಡ್‌ನಿಂದ 265 ಜನರು ಮೃತಪಟ್ಟಿರುವ ಕುರಿತು ತಮ್ಮ ಬಳಿ ದಾಖಲೆಯಿದೆ. ಮೃತಪಟ್ಟಿರುವವರು 135 ಜನರು ಎಂಬ ಸರಕಾರ ನೀಡಿರುವ ಅಂಕಿ-ಅಂಶ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ಒದಗಿಸುತ್ತಲಿದೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಆರೋಪಿಸಿದರು.

Advertisement

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಹಾಗೂ ಜಿಲ್ಲಾಡಳಿತ ಕೋವಿಡ್‌ ಸೋಂಕು ಹರಡದಂತೆ ತಡೆಗಟ್ಟುವಿಕೆ ಹಾಗೂ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅವು ನೀಡುತ್ತಿರುವ ಅಂಕಿ ಸಂಖ್ಯೆಗಳೂ ಸಮರ್ಪಕವಾಗಿರುವುದಿಲ್ಲ. ಕಲಘಟಗಿಯಲ್ಲಿ 83 ಹಾಗೂ ಅಳ್ನಾವರ ತಾಲೂಕಿನಲ್ಲಿ 52 ಒಟ್ಟೂ 135 ಜನರು ಕೋವಿಡ್‌ನಿಂದ ಮೃತಪಟ್ಟಿರುವುದಾಗಿ ಸರಕಾರ ತಿಳಿಸಿದೆ. ಆದರೆ, ಮತಕ್ಷೇತ್ರದಾದ್ಯಂತ ಒಟ್ಟು 265 ಜನರು ಕೋವಿಡ್‌ಪೀಡಿತರಾಗಿ ಮೃತಪಟ್ಟಿರುವ ಕುರಿತು ಖಚಿತ ಮಾಹಿತಿ ದೊರಕಿದೆ ಎಂದರು.

ರಾಹುಲ್‌ ಗಾಂಧಿ  ಅವರ “ಕೋವಿಡ್‌ ಸೋಂಕಿತರಿಗೆ ಸಹಾಯ ಹಸ್ತ’ ಕಾರ್ಯಕ್ರಮದನ್ವಯ ಪಕ್ಷದ ಪದಾಧಿಕಾರಿಗಳು ಮತಕ್ಷೇತ್ರದಾದ್ಯಂತ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದು, ಕೋವಿಡ್‌ ಸಂದರ್ಭದಲ್ಲಿ ಕಲಘಟಗಿಯಲ್ಲಿ 376 ಹಾಗೂ ಅಳ್ನಾವರದಲ್ಲಿ 109 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಕೋವಿಡ್‌ನಿಂದ ಸರಕಾರದ ಅಂಕಿ-ಸಂಖ್ಯೆಗಳನ್ನು ಹೊರತುಪಡಿಸಿ ಕಲಘಟಗಿಯ 110 ಹಾಗೂ ಅಳ್ನಾವರದ 20 ಜನರು ಹೆಚ್ಚಿನದಾಗಿ ಮೃತಪಟ್ಟಿದ್ದು, ಈ ಕುರಿತು ತಮ್ಮಲ್ಲಿರುವ ಸಮಗ್ರ ಮಾಹಿತಿಯನ್ನು ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಪುನರ್‌ ಪರಿಶೀಲನೆ ನಡೆಸುವಂತೆ ಒತ್ತಾಯಿಸುತ್ತೇವೆ. ಕೋವಿಡ್‌ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಕುಟುಂಬ ವರ್ಗದವರೆಲ್ಲರಿಗೂ ನ್ಯಾಯ ಒದಗಿಸಿಕೊಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು.

ತಾಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಈಗಾಗಲೇ ಆಗ್ರಹಿಸಿದ್ದು, ಅದಕ್ಕೆ ಪೂರಕವಾಗಿ ಅಬಕಾರಿ ಇಲಾಖೆ ಭೋಗೇನಾಗರಕೊಪ್ಪ, ಹಸರಂಬಿ ಹಾಗೂ ಗಳಗಿಹುಲಕೊಪ್ಪ ಗ್ರಾಮಗಳಲ್ಲಿ ನಾಮಕೇವಾಸ್ತೆ ಮೂರು ಪ್ರಕರಣಗಳನ್ನು ದಾಖಲಿಸಿ ಕೈ ತೊಳೆದುಕೊಂಡಿದೆ. ಅಕ್ರಮ ಮದ್ಯ ಮಾರಾಟ ಕೇವಲ ತಾಲೂಕಿಗೆ ಸೀಮಿತಗೊಳ್ಳದೆ ಜಿಲ್ಲಾದ್ಯಂತ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಲ್ಲಿ ನಿಯೋಗದೊಂದಿಗೆ ತೆರಳಿ ಅಕ್ರಮ ಸಾರಾಯಿ ಮಾರಾಟ ತಡೆಗೆ ತಕ್ಷಣ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಆರ್‌. ಪಾಟೀಲ, ಹರಿಶಂಕರ ಮಠದ, ವೈ.ಬಿ. ದಾಸನಕೊಪ್ಪ, ಸೋಮಶೇಖರ ಬೆನ್ನೂರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next