ವಿಜಯಪುರ: ಕರವೇ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ (35) ಅವರನ್ನು ಹತ್ಯೆ ಮಾಡಿ ಕೊಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆ ಬಳಿ ಎಸೆದಿರುವ ಘಟನೆ ಜರುಗಿದೆ. ಕೃತ್ಯದ ಬಳಿಕ ಹಂತಕರು ಪರಾರಿಯಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕೃಷ್ಣಾ ನದಿ ಸೇತುವೆ ಕೆಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಆದರೆ, ಮೃತ ಮಹಿಳೆ ಯಾರೆಂದು ತಕ್ಷಣ ತಿಳಿಯದೇ ಅನಾಮಧೇಯ ಶವ ಎಂದು ಭಾವಿಸಲಾಗಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಮಹಿಳೆಯ ಶವ ರೇಷ್ಮಾ ಪಡೇಕನೂರ ಅವರದ್ದು ಎಂದು ಗುರುತಿಸಲಾಯಿತು. ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಮೃತಳ ಪತಿ ಖಾಜಾ ಬಂದೇನವಾಜ್ ಪಡೇಕನೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಸೊಲ್ಲಾಪುರ ಮೂಲದ ಎಐಎಂಐಎಂ ಪಕ್ಷದ ಪ್ರಮುಖ ಎನ್ನಲಾದ ತೌಫಿಕ್ ಇಸ್ಮಾಯಿಲ್ ಶೇಖ್ ಉರ್ಫ್ ಫೈಲ್ವಾನ್ ತೌಫಿಕ್ ಎಂಬುವರಿಗೆ ರೇಷ್ಮಾ ಪಡೇಕನೂರ 12 ಲಕ್ಷ ರೂ.ಸಾಲ ನೀಡಿದ್ದು, ಕೊಟ್ಟ ಹಣವನ್ನು ಮರಳಿಸುವಂತೆ ಹಲವು ಬಾರಿ ಕೇಳಿದ್ದರು. ಆದರೆ, ತೌಫಿಕ್ ಹಣ ನೀಡದ ಕಾರಣ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.
ಈ ಕುರಿತು ಕಳೆದ ಕೆಲ ತಿಂಗಳ ಹಿಂದೆ ಹಣಕ್ಕಾಗಿ ಬೆದರಿಸಿದ್ದಾಗಿ ಸೊಲ್ಲಾಪುರ ಠಾಣೆಯಲ್ಲಿ ರೇಷ್ಮಾ ಪಡೇಕನೂರ ವಿರುದ್ಧ ದೂರು ದಾಖಲಾಗಿತ್ತು. ಇದೆ ವಿಷಯವಾಗಿ ಮಾತನಾಡುವುದಿದೆ ಎಂದು ಗುರುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತೌಫಿಕ್ ಮೊಬೈಲ್ ಕರೆ ಮಾಡಿ ರೇಷ್ಮಾ ಪಡೇಕನೂರ ಅವರನ್ನು ಕರೆಸಿಕೊಂಡು, ವಾಹನದಲ್ಲಿ ಕರೆದೊಯ್ದಿದ್ದ. ನಂತರ, ಶುಕ್ರವಾರ ಕೊಲ್ಹಾರ ಬಳಿ ಕೃಷ್ಣಾ ನದಿ ಸೇತುವೆ ಬಳಿ ರೇಷ್ಮಾ ಶವವಾಗಿ ಪತ್ತೆಯಾಗಿದ್ದಾರೆ.
ನಾರಾಯಣಗೌಡ ಬಣದ ಕರವೇ ರಾಜ್ಯ ಉಪಾಧ್ಯಕ್ಷೆಯಾಗಿದ್ದ ರೇಷ್ಮಾ ಪಡೇಕನೂರ ಕನ್ನಡಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. 2013ರಲ್ಲಿ ದೇವರಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಕೈ ತಪ್ಪಿದ್ದರಿಂದ ಕಾಂಗ್ರೆಸ್ ಸೇರಿದ್ದರು.