ಚಿತ್ರದುರ್ಗ: ಲಕ್ಷ ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದ್ದರೂ ಬಿಜೆಪಿ ಸಚಿವರಿಗೆ ಪುರುಸೊತ್ತಿಲ್ಲ. ಜನಸ್ವರಾಜ್ ಯಾತ್ರೆ ಮೂಲಕ ಮತ ಕೇಳಲು ಹೊರಟಿದ್ದಾರೆ. ರಾಜ್ಯದ ಜನ, ರೈತರು ಸಂಕಷ್ಟದಲ್ಲಿದ್ದಾಗ ಬಿಜೆಪಿ ಯಾತ್ರೆ ಮಾಡುತ್ತಿದೆ. ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೇಳಿದ ಸುಳ್ಳು ಜನರಿಗೆ ಇಂಪಾಗಿ ಕೇಳಿಸಿತು. ಪರಿಣಾಮ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೋಲಾಗಿತ್ತು, ಈಗ ಬಿಜೆಪಿ ಮಾತಿನ ಮಲ್ಲರ ಪಕ್ಷ ಎಂಬುದು ಜನರಿಗೆ ತಿಳಿದಿದೆ ಎಂದರು.
ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಬಿಜೆಪಿ ಲೋಕಸಭಾ ಸದಸ್ಯರು ಯಾವುದೇ ವಿಚಾರದಲ್ಲಿ ದನಿ ಎತ್ತುತ್ತಿಲ್ಲ. ತಿರುಪತಿಗೆ ತೆರಳಿ ನಮಸ್ಕಾರಿಸಿದಂತೆ ಮೋದಿಗೆ ನಮಸ್ಕಾರ ಮಾಡಿ ಬರುತ್ತಾರೆ. ಪ್ರಧಾನಿ ಮೋದಿಗೆ ಪರಿಹಾರ ಹಣ ಕೇಳುವ ತಾಕತ್ತಿಲ್ಲ. ಬರೀ ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ವರಿಷ್ಠರ ಆಶೀರ್ವಾದ ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು: ಜಾರಕಿಹೊಳಿ ಹೊಸ ಬಾಂಬ್
ಹೊಸ ಸಿಎಂ ಕುರಿತು ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ರಾಜ್ಯದ ನಾಯಕರಲ್ಲಿ ಆಂತರಿಕ ಕಚ್ಚಾಟ ಶುರುವಾಗಿದೆ. ಹೊಸ ಮುಖ್ಯಮಂತ್ರಿ ಬರುತ್ತಾರೆಂದು ಈಶ್ವರಪ್ಪನವರಿಗೆ ಗೊತ್ತಿದೆ ಎಂದರು.
ಬೆಲೆ ಏರಿಕೆ, ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಲಂಚ ಇರಲಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಕಡಿಮೆ ಇತ್ತು, ಕಂಡೂ ಕಾಣದಂತೆ ಇತ್ತು. ಬಿಜೆಪಿ ಆಡಳಿತ ವೇಳೆ ಲಂಚದ ಪ್ರಮಾಣ ಶೇ.40ರಷ್ಟಾಗಿದೆ. ಈಗಾಗಲೇ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.