ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ತಮ್ಮ ಸ್ವಕ್ಷೇತ್ರ ವಯನಾಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಿಗೊಂದು ಸರ್ ಪ್ರೈಸ್ ಎದುರಾಯ್ತು. ಕಾರಿನಲ್ಲಿ ಕುಳಿತಿದ್ದ ರಾಹುಲ್ ಅವರನ್ನು ಅಲ್ಲಿ ಸೇರಿದ್ದ ಜನರು ಸ್ವಾಗತಿಸುತ್ತಿರುವ ಸಂದರ್ಭದಲ್ಲಿ ನೀಲಿ ಅಂಗಿ ಧರಿಸಿದ್ದ ಯುವಕನೊಬ್ಬ ರಾಹುಲ್ ಗಾಂಧಿ ಅವರಿಗೆ ಶೇಕ್ ಹ್ಯಾಂಡ್ ನೀಡುತ್ತಾನೆ ಮತ್ತು ತಕ್ಷಣವೇ ರಾಹುಲ್ ಅವರ ಕುತ್ತಿಗೆ ಭಾಗಕ್ಕೆ ಕೈ ಹಾಕಿ ಅವರನ್ನು ಸೆಳೆದು ಅವರ ಕೆನ್ನೆಗೆ ಒಂದು ‘ಮುತ್ತು’ ನೀಡುತ್ತಾನೆ.
ಈ ಘಟನೆ ನಡೆದ ತಕ್ಷಣ ರಾಹುಲ್ ಅವರು ಏನೂ ಆಗಿಲ್ಲ ಎಂಬಂತೆ ಉಳಿದವರಿಗೆ ಶೇಕ್ ಹ್ಯಾಂಡ್ ನೀಡುತ್ತಾರೆ. ರಾಗಾ ಅವರಿಗೆ ಮುತ್ತು ನೀಡಿದ ಯುವಕನ ಕುತ್ತಿಗೆಗೆ ಹಿಂದಿನಿಂದ ಕೈ ಹಾಕಿ ಯಾರೋ ಈಚೆಗೆ ಎಳೆಯುತ್ತಾರೆ. ಇಷ್ಟು ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿರುವ ಸುಮಾರು 22 ಸೆಕೆಂಡುಗಳ ವಿಡಿಯೋದ ಪ್ರಾರಂಭದಲ್ಲಿ ಯುವಕ ರಾಹುಲ್ ಗಾಂಧಿ ಅವರನ್ನು ಚುಂಬಿಸುವ ದೃಶ್ಯ ಸೆರೆಯಾಗಿದೆ. ಬಳಿಕದ ದೃಶ್ಯಗಳಲ್ಲಿ ರಾಹುಲ್ ಗಾಂಧಿ ಅವರು ತನ್ನ ಕಾರನ್ನು ಸುತ್ತುವರೆದಿದ್ದವರಿಗೆ ಹಸ್ತಲಾಘವ ನೀಡುತ್ತಿರುವುದು ಸೆರೆಯಾಗಿದೆ.
ತನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರವಾಹ ಪರಿಹಾರ ಕಾಮಗಾರಿಗಳ ವೀಕ್ಷಣೆಗೆಂದು ರಾಹುಲ್ ಅವರು ಇಂದು ವಯನಾಡಿಗೆ ಭೇಟಿ ನೀಡಿದ್ದಾರೆ. ಈ ಬಾರಿ ವಯನಾಡಿನ ಹಲವೆಡೆಗಳಲ್ಲಿ ಭೂಕುಸಿತ ಸಂಭವಿಸಿ ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗಿತ್ತು, ಮತ್ತು ಹಲವಾರು ಮನೆಗಳು ಭಾರೀ ಪ್ರಮಾಣದ ಮಣ್ಣಿನಡಿಯಲ್ಲಿ ಸಿಲುಕಿ ನಾಮಾವಶೇಷ ಆಗಿ ಹೋಗಿತ್ತು. ಹಲವರು ತಮ್ಮ ಪ್ರಾಣಗಳನ್ನೂ ಕಳೆದುಕೊಂಡಿದ್ದರು.
Related Articles
ರಾಹುಲ್ ಗಾಂಧಿ ಅವರು ತಮ್ಮ ಈ ಭೇಟಿಯ ಸಂದರ್ಭದಲ್ಲಿ ಸಂತ್ರಸ್ತ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಪುನರ್ವಸತಿ ಕಾರ್ಯಗಳ ಪರಿಶೀಲನೆಯನ್ನೂ ಸಹ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಅವರು ಈ ಹಿಂದೆಯೂ ಹಲವು ಬಾರಿ ಸಾರ್ವಜನಿಕರಿಂದ ಚುಂಬನಕ್ಕೊಳಗಾಗಿದ್ದಾರೆ.
ಈ ವರ್ಷದ ಪ್ರಾರಂಭದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಗುಜರಾತ್ ನಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರ ಕೆನ್ನೆಯನ್ನು ಚುಂಬಿಸಿದ್ದರು. ಕಾಕತಾಳಿಯವೆಂಬಂತೆ ಅಂದು ಪ್ರೇಮಿಗಳ ದಿನವಾಗಿತ್ತು.
ಇದೇ ರೀತಿಯ ಇನ್ನೊಂದು ಘಟನೆಯಲ್ಲಿ 2014ರಲ್ಲಿ ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಲದಲ್ಲಿ ಪಕ್ಷದ ಜಾಥಾದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸಿಹಿ ತಿಂಡಿ ಮಳಿಗೆಯೊಂದರಲ್ಲಿ ವ್ಯಕ್ತಿಯೊಬ್ಬ ರಾಹುಲ್ ಗಾಂಧಿ ಕೆನ್ನೆಗೆ ಮುತ್ತು ಕೊಟ್ಟಿದ್ದ.