ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಗಣಿನಾಡು ಬಳ್ಳಾರಿ ಜಿಲ್ಲೆ ಸಹಿತ ಕರ್ನಾಟಕದಲ್ಲಿ 17 ದಿನಗಳಿಂದ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ರವಿವಾರ ಸಂಜೆ ನೆರೆಯ ಆಂಧ್ರಪ್ರದೇಶಕ್ಕೆ ಪ್ರವೇಶಿಸಿತು.
ತಾಲೂಕಿನ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿ ಶನಿವಾರ ರಾತ್ರಿ ತಂಗಿದ್ದ ರಾಹುಲ್ ಗಾಂಧಿ ಅ.16ರಂದು ಬೆಳಗ್ಗೆ 6.30ಕ್ಕೆ ಗ್ರಾಮದ ಕಾಳಿದಾಸ ವೃತ್ತದಿಂದ ಯಾತ್ರೆ ಆರಂಭಿಸಿದರು. ಆರಂಭದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲರೊಂದಿಗೆ ರಾಹುಲ್ ಹೆಜ್ಜೆ ಹಾಕಿದರು.
ಮೋಕಾದಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಬಳಿಕ ಎಸ್‌ಪಿಜಿ ಅತ್ಯಂತ ಬಿಗುವಿನ ನಿಲುವು ತಳೆಯಿತು. ಅಲ್ಲಿಂದ ನೇರ ವಿಶ್ರಾಂತಿ ಸ್ಥಳಕ್ಕೆ ತೆರಳಿದ ಬಳಿಕ ಎಸ್‌ಪಿಜಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ವಹಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುಜೇìವಾಲ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಎಸ್‌ಪಿಜಿ ಪಡೆ ಆಸ್ಪತ್ರೆಯಲ್ಲಿ ಪರಿಶೀಲಿಸಿ ಅನುಮತಿ ನೀಡಿದ ಬಳಿಕ ರಾಹುಲ್ ಗಾಂಧಿ ಆಗಮಿಸಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.
ಸಂಜೆ ನಿಗದಿಯಾದಂತೆ 4.30ಕ್ಕೆ ಯಾತ್ರೆ ಪುನರಾರಂಭಗೊಂಡಿತು. ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗಿದ್ದರು. ರಾಹುಲ್ ಗಾಂಧಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಕೆಲವರು ಮುಗಿಬಿದ್ದರಾದರೂ ಎಸ್‌ಪಿಜಿ ಅವಕಾಶ ಕೊಡಲಿಲ್ಲ.
ಅ.17ರಂದು ಎಐಸಿಸಿ ಚುನಾವಣೆ ನಿಮಿತ್ತ ಯಾತ್ರೆ ಇರುವುದಿಲ್ಲ. ಅ.19ರಿಂದ ಆಂಧ್ರಪ್ರದೇಶದ ಛತ್ರಗುಡಿಯಿಂದ ಯಾತ್ರೆ ಪುನರಾರಂಭಗೊಳ್ಳಲಿದೆ.