Advertisement

ಸರ್ಕಾರದಲ್ಲಿ ಮುಗಿಲು ಮುಟ್ಟಿದೆ ಭ್ರಷ್ಟಾಚಾರ

07:39 PM Mar 04, 2021 | Team Udayavani |

ದೇವನಹಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಜನರ ಯಾವುದೇ ಸಮಸ್ಯೆಗೆ ಈ ಸರ್ಕಾರದಿಂದ ಪರಿಹಾರ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಯಾವುದೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಹೊಸ ಬಸ್‌ ನಿಲ್ದಾಣದ ಆವರಣದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಜನಧ್ವನಿ  ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಬಿಜೆಪಿಯಲ್ಲಿ ಇಬ್ಬರು ಭ್ರಷ್ಟರಿದ್ದಾರೆ. ಒಬ್ಬರು ಯಡಿಯೂರಪ್ಪ, ಮತ್ತೂಬ್ಬರು ಅವರ ಮಗ ವಿಜಯೇಂದ್ರ ಆಗಿದ್ದಾರೆ. ಯಡಿಯೂರಪ್ಪ ಚೆಕ್‌ಗಳ ಮೂಲಕ ಲಂಚ ಪಡೆದರೆ, ಮಗ ಆರ್‌ಟಿಜಿಎಸ್‌ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕಾಂಗ್ರೆಸ್‌ ಸರ್ಕಾರ ರೈತರ ಪರ, ಮಹಿಳೆಯರ ಪರ, ದೀನದಲಿತರ ಪರ ಉತ್ತಮ ಆಡಳಿತವನ್ನು ನೀಡಿ ಜನಮೆಚ್ಚುಗೆ ಪಡೆದಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಬಡವರ ಹಸಿವನ್ನು ಅರಿತುಕೊಂಡು, ಅನ್ನಭಾಗ್ಯ ಯೋಜನೆ ಜಾರಿಗೆ ತಂದು 7 ಕೆ.ಜಿ. ಅಕ್ಕಿಯನ್ನು ಕೊಡುತ್ತಿದ್ದೇವು. ಇದೀಗ ಯಡಿಯೂರಪ್ಪ ಸರ್ಕಾರದಲ್ಲಿ 2 ಕೆ.ಜಿ. ಕಡಿಮೆ ಮಾಡಿದೆ ಎಂದು ಹೇಳಿದರು.

ಸರ್ಕಾರ ಏನು ಕೆಲಸ ಮಾಡುತ್ತಿಲ್ಲ: ಜನಧ್ವನಿ ಯಾತ್ರೆಯ ಉದ್ದೇಶ ಜನರು ಸಮಸ್ಯೆಯಿಂದ ಇದ್ದು, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಜನರೊಂದಿಗೆ ಬೆರೆತು ಜನರಿಗೊಸ್ಕರ್‌ ಹೋರಾಟ ಮಾಡಲಾಗುತ್ತಿದೆ. 100 ಕ್ಷೇತ್ರಗಳಲ್ಲಿ ಜನಧ್ವನಿ ಯಾತ್ರೆ ಮುಂದುವರಿಯಲಿದೆ. ಯಡಿಯೂರಪ್ಪ ಸರ್ಕಾರ ಆಫ್‌ ಆಗಿದೆ. ಅವರ ಸರ್ಕಾರ ಏನು ಕೆಲಸ ಮಾಡುತ್ತಿಲ್ಲ. ಭ್ರಷ್ಟಾಚಾರ ಮಾಡುತ್ತಿದ್ದಾರೆ ಅಷ್ಟೇ ಎಂದರು.

ಮೋದಿಯವರೇ ಪೆಟ್ರೋಲ್‌, ಡೀಸೆಲ್‌ ಬೆಲೆ 100 ರೂ. ಮಾಡಿದ್ದಿರಲ್ಲ ನಿಮಗೇನಾದರೂ ಮಾನ ಇದೆಯೇ?. ಈ ಸರ್ಕಾರವನ್ನು ಕಿತ್ತೂಗೆಯಬೇಕು. ಜನರ ಸಮಸ್ಯೆಗೆ ಧ್ವನಿಯಾಗಬೇಕು. ನಿವೆಲ್ಲರೂ ಸೇರಿ ಧ್ವನಿಯಾಗಬೇಕು. ಅದಕ್ಕೊಸ್ಕರ ಈ ಜಾಥಾ ನಡೆಸಲಾಗಿದೆ ಎಂದರು.

Advertisement

ವಿಮಾನ ನಿಲ್ದಾಣ ತಂದಿದ್ದು ಕಾಂಗ್ರೆಸ್‌: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಂದಿದ್ದು ಕಾಂಗ್ರೆಸ್‌. ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುವ ಟ್ಯಾಕ್ಸಿ ಡ್ರೈವರ್‌ಗಳಿಗೆ, ಸವಿತಾ ಸಮಾಜದವರಿಗೆ, ಬಟ್ಟೆ ಹೊಗೆಯುವವರಿಗೆ, ಕೂಲಿ ಕಾರ್ಮಿಕರಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ತಲಾ 10ಸಾವಿರ ರೂ. ನೀಡುವಂತೆ ಮನವಿ ಮಾಡಿದರೆ, 5 ಸಾವಿರ ರೂ. ನೀಡುತ್ತೇನೆ ಎಂದು ಹೇಳಿ ಯಾರಿಗೂ ಹಣ ನೀಡಿಲ್ಲ. ಯಾರಿಗಾದರೂ ಹಣ ನೀಡಿದ್ದಾರಾ, ರೈತರಿಗೆ ಬೆಂಬಲ ಬೆಲೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಹೆಚ್ಚಿನ ಜನರು ಇದ್ದರು. ಮಹಿಳೆಯರು ಗ್ಯಾಸ್‌ ಸಿಲಿಂಡರ್‌ ಭಾವಚಿತ್ರವನ್ನು ಕೊರಳಿಗೆ ಕಟ್ಟಿಕೊಂಡು ಪಾದಯಾತ್ರೆ ನಡೆಸಿದರೆ, ರೈತಾಪಿಗಳು ಟ್ರ್ಯಾಕ್ಟರ್‌ ಮೂಲಕ ಪ್ರತಿಭಟನೆಗೆ ಸಾಥ್‌ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ, ರಾಮಲಿಂಗರೆಡ್ಡಿ,  ಧೃವನಾರಾಯಣ್‌, ಸಲೀಂ ಅಹಮದ್‌, ಮಾಜಿ ಸಂಸದ ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ, ಡಿ.ಕೆ.ಸುರೇಶ್‌, ಶಾಸಕ ಕೃಷ್ಣಭೈರೇಗೌಡ, ವೆಂಕಟರಮಣಯ್ಯ, ಶರತ್‌ ಬಚ್ಚೇಗೌಡ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಶಾಸಕ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಅಂಜನಮೂರ್ತಿ, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಪುಷ್ಪಾ, ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ, ಸಿ.ಪ್ರಸನ್ನಕುಮಾರ್‌, ವಿ.ಪ್ರಸಾದ್‌, ಕೆ.ಸಿ.ಮಂಜುನಾಥ್‌, ಎ.ಸಿ.ಶ್ರೀನಿವಾಸ್‌, ಚೌಡಪ್ಪನಹಳ್ಳಿ ಎಂ.ಲೋಕೇಶ್‌, ದ್ಯಾವರಹಳ್ಳಿ ವಿ.ಶಾಂತ ಕುಮಾರ್‌, ಪುರುಷೋತ್ತಮ್‌ಕುಮಾರ್‌, ಚಿನ್ನಪ್ಪ, ಚೇತನ್‌ಗೌಡ, ಜಿಪಂ ಸದಸ್ಯೆ ಅನಂತಕುಮಾರಿ, ಚೈತ್ರಾ, ಶಶಿಕಲಾ, ಸೋಮಶೇಖರ್‌ ಸೇರಿದಂತೆ ಹಲವಾರು ಕೆಪಿಸಿಸಿ ನಾಯಕರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next