ಹೊಸದಿಲ್ಲಿ : ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲರ ಆಯ್ಕೆ ಮತ್ತು ನೇಮಕಾತಿಯ ನಿರ್ಣಾಯಕ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವುದಕ್ಕೆ ನಿರಾಕರಿಸಿದ್ದಾರೆ.
“ಲೋಕಪಾಲ ನೇಮಕಾತಿ ಸಭೆಯಲ್ಲಿ ನಾನು ಭಾಗವಹಿಸಲಾರೆ; ಏಕೆಂದರೆ ಲೋಕಪಾಲರ ನೇಮಕಾತಿ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳನ್ನು ಹೊರಗಿಡುವುದೇ ಸರಕಾರದ ಉದ್ದೇಶವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಖರ್ಗೆ ಆರೋಪಿಸಿದ್ದಾರೆ.
“ವಿಶೇಷ ಆಹ್ವಾನಿತ ಕರೆಯೋಲೆಯು ಲೋಕಪಾಲ ನೇಮಕಾತಿ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳ ಸ್ವತಂತ್ರ ಧ್ವನಿಯನ್ನು ಪ್ರತ್ಯೇಕಗೊಳಿಸುವ ಪೂರ್ವ ಯೋಜಿತ ಕ್ರಮವಾಗಿದೆ’ ಎಂದು ಖರ್ಗೆ ದೂರಿದ್ದಾರೆ.
“ಕಾಂಗ್ರೆಸ್ ನೇತೃತ್ವದ ಯುಪಿಎ 2013ರ ಲೋಕಪಾಲ ಕಾಯಿದೆಯನ್ನು ಪಾಸು ಮಾಡಿ 2014ರ ಜನವರಿ 16ರಂದು ಅದನ್ನು ಜಾರಿಗೆ ತಂದಿತ್ತು. ಭ್ರಷ್ಟಾಚಾರ ನಿಗ್ರಹಿಸುವ ಬಗ್ಗೆ ನೀವು ಪದೇ ಪದೇ ಧ್ವನಿ ಎತ್ತರಿಸಿ ಮಾತನಾಡುತ್ತಿರುವ ಹೊರತಾಗಿಯೂ ಲೋಕಪಾಲರನ್ನು ನೇಮಿಸದಿರಲು ಸರಕಾರ ನಾಲ್ಕು ವರ್ಷಗಳನ್ನೇ ತೆಗೆದುಕೊಂಡಿತು; ಈಗ ನೀವು ಲೋಕಪಾಲರ ನೇಮಕಾತಿ ಬಗ್ಗೆ ಚಿಂತನೆ ನಡೆಸುತ್ತಿದ್ದೀರಿ; ಇದು ಬರೀ ಕಾಗದದ ಪ್ರಕ್ರಿಯೆಯೇ ವಿನಾ ಇದರಿಂದ ಲೋಕಪಾಲರ ನೇಮಕಾತಿ ಆಗುವ ಸಂಭವ ಇಲ್ಲ’ ಎಂದು ಖರ್ಗೆ ಪತ್ರದಲ್ಲಿ ದೂರಿದ್ದಾರೆ.
ಪ್ರಧಾನಿ ಮೋದಿ ಕರೆದಿರುವ ಉನ್ನತ ಮಟ್ಟದ ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಪಾಲ್ಗೊಳ್ಳಲಿದ್ದಾರೆ.