ಕಲಬುರಗಿ: ಹಲವು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದ್ದ ರಾಜ್ಯದಲ್ಲೇ ಪ್ರಥಮವಾಗಿ ಕಲಬುರಗಿಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ಎರಡು ದಿನಗಳ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಯ ಅಧ್ಯಯನ ಪ್ರವಾಸ ಮತ್ತು ಸಭೆಗೆ ನಿರೀಕ್ಷೆಯಷ್ಟು ಸಮಿತಿ ಸದಸ್ಯರು ಬಾರದೇ ಗೈರು ಹಾಜರಾಗುವ ಮೂಲಕ ಈ ಭಾಗದ ಜನತೆಯಲ್ಲಿ ನಿರಾಶೆಯನ್ನುಂಟು ಮಾಡಿದ್ದಾರೆ.
ಲೆಕ್ಕಪತ್ರ ಸಮಿತಿಯಲ್ಲಿ 15 ಸಂಸದರು ಹಾಗೂ ರಾಜ್ಯಸಭೆಯ ಏಳು ಸದಸ್ಯರು ಸೇರಿ ಒಟ್ಟಾರೆ 22 ಸದಸ್ಯರಿದ್ದರೂ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಸೇರಿ ಕೇವಲ ಮೂವರು ಮಾತ್ರ ಕಲಬುರಗಿಗೆ ಆಗಮಿಸಿದ್ದರು. ಪಿಎಸಿಯನ್ನು ಮಿನಿ ಸಂಸತ್ ಎಂದೇ ಕರೆಯಲಾಗುತ್ತದೆ.
ಸುಮಾರು 97 ವರ್ಷಗಳ ಇತಿಹಾಸ ಹೊಂದಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ವಾತಂತ್ರ್ಯಪೂರ್ವದಿಂದಲೂ ಅಂದರೆ 1921ರಿಂದ ಅಸ್ತಿತ್ವದಲ್ಲಿದೆ. ಕೇಂದ್ರದ ಹಣಕಾಸಿನ ವ್ಯವಹಾರಗಳನ್ನು ಪರಿಶೀಲಿಸುವಂತಹ ಉನ್ನತ ಅಧಿಕಾರವನ್ನು ಪಿಎಸಿ ಹೊಂದಿದ್ದು,ಸಮಿತಿಯ ಸಭೆಗಳು ಹೆಚ್ಚಾಗಿ ದೆಹಲಿಯಲ್ಲೇ ನಡೆಯುತ್ತವೆ. ಆಗಾಗ ಬೇರೆ,ಬೇರೆ ಸ್ಥಳಗಳಿಗೆ ಪ್ರವಾಸ ಕೈಗೊಂಡು ಸಭೆಯನ್ನು ನಡೆಸಿರುವ ಉದಾಹರಣೆಗಳು ಇವೆ. ಕಲಬುರಗಿ ಸಂಸದರು ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2017-18ರಲ್ಲಿ ಮೊದಲ ಬಾರಿಗೆ ಪಿಎಸಿ ಅಧ್ಯಕ್ಷ ಸ್ಥಾನದ ಒಲಿದಿದ್ದು, 2018-19ನೇ ಸಾಲಿಗೂ ಅವರು ಅಧ್ಯಕ್ಷರಾಗಿ ಮುಂದುವರಿದ್ದಾರೆ.
ಹೀಗಾಗಿಯೇ 97 ವರ್ಷಗಳ ನಂತರ ಲೆಕ್ಕಪತ್ರ ಸಮಿತಿ ಸದಸ್ಯರನ್ನು ಅಧ್ಯಯನ ಪ್ರವಾಸ ಮತ್ತು ಸಭೆಗೆಂದು ಸಂಸದ ಖರ್ಗೆ ಕರ್ನಾಟಕಕ್ಕೆ ಪ್ರಥಮ ಬಾರಿಗೆ ಕರೆದುಕೊಂಡು ಬಂದಿದ್ದರು. ಅದರಲ್ಲೂ ವಿಶೇಷ ಕಾಳಜಿ ಮತ್ತು ಆಸಕ್ತಿ ವಹಿಸಿ ತಾವೇ ಪ್ರತಿನಿಧಿಸುವ ಕಲಬುರಗಿಗೆ ಸಮಿತಿಯನ್ನು ಕರೆಸಿ, ಇಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್ ಐಸಿ ಮೆಡಿಕಲ್ ಹಬ್, ನೂತನ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳ ಪರಿಶೀಲನೆ ಕೈಗೊಂಡು ಮತ್ತು ಪಿಎಸಿಗೆ ಸಂಬಂಧಪಟ್ಟ ಸಭೆಯನ್ನು ನಡೆಸಲಾಯಿತು.
12 ಸದಸ್ಯರು ಆಗಮಿಸುವ ನಿರೀಕ್ಷೆ ಇತ್ತು: ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿರುವುದಿಂದ ಅದರಲ್ಲೂ ರಾಜ್ಯಕ್ಕೆ ಮೊದಲ ಬಾರಿಗೆ ಸಮಿತಿ ಭೇಟಿ ನೀಡುತ್ತಿರುವುದರಿಂದ ಕನಿಷ್ಠ 12 ಸದಸ್ಯರು ಕಲಬುರಗಿಗೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ,ಎರಡು ದಿನಗಳ ಪಿಎಸಿಯ ಅಧ್ಯಯನ ಪ್ರವಾಸ ಹಾಗೂ ಸಭೆಗೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇವಲ ಇಬ್ಬರೇ ಸದಸ್ಯರು ಆಗಮಿಸಿದ್ದು ನಿರಾಶೆ ಮೂಡಿಸಿತು. ರಾಜ್ಯದವರೇ ಆದ ಹಾವೇರಿ ಸಂಸದ ಶಿವಕುಮಾರ ಉದಾಸಿ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಕೂಡ ಪಿಎಸಿ ಸದಸ್ಯರಾಗಿದ್ದಾರೆ. ಆದರೆ, ಇಬ್ಬರೂ ಮೊದಲ ದಿನ ಕಲಬುರಗಿಗೆ ಬಂದಿರಲಿಲ್ಲ.